ಅಹಮದಾಬಾದ್: ನೋಂದಾಯಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪ್ಯಾಕ್ಸ್) ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕುವುದನ್ನು ತಡೆಯಲು ಸರ್ಕಾರವು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಭಾನುವಾರ ನಡೆದ ಸಹಕಾರ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ಯಾಕ್ಸ್‌ಗಳು ಆರ್ಥಿಕವಾಗಿ ದಿವಾಳಿಯಾದರೆ ಆ ಸಮಸ್ಯೆಯ ತ್ವರಿತ ಇತ್ಯರ್ಥ ಹಾಗೂ ಅವುಗಳ ಸ್ಥಾನದಲ್ಲಿ ಹೊಸ ಪ್ಯಾಕ್ಸ್‌ಗಳ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರವು ಶೀಘ್ರವೇ ಹೊಸ ನೀತಿಯನ್ನು ಅನುಷ್ಠಾನಗೊಳಿಸಲಿದೆ ಎಂದು ಹೇಳಿದರು.
2029ರೊಳಗೆ ಹೊಸದಾಗಿ 2 ಲಕ್ಷ ಪ್ಯಾಕ್ಸ್ ಸ್ಥಾಪನೆಗೆ ಗುರಿ ಹೊಂದಲಾಗಿದೆ. ಈ ಸಂಘಗಳಿಗೆ 22 ಬಗೆಯ ವಹಿವಾಟು ನಡೆಸಲು ಅನುಕೂಲ ಕಲ್ಪಿಸಲಾಗುವುದು. ಇದರಿಂದ ನೋಂದಾಯಿತ ಸಂಘಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ತಪ್ಪಲಿದೆ. ಹೊಸ ನೀತಿಯಿಂದ ಮುಂದಿನ ದಿನಗಳಲ್ಲಿ ಯಾವುದೇ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಿಲ್ಲ ಎಂದು ಭರವಸೆ ನೀಡಿದರು.
ಹೈನುಗಾರಿಕೆ ವಲಯದ ಬಲವರ್ಧನೆಗೆ ಸರ್ಕಾರ ಬದ್ಧವಿದೆ. ಇದಕ್ಕೆ ಪೂರಕವಾಗಿ ಸಹಕಾರ ಕಂಪನಿಯೊಂದನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಇದರ ಮೂಲಕ ಐಸ್ ಕ್ರೀಮ್, ಗಿಣ್ಣು, ಪನೀರ್ ತಯಾರಿಸಲಾಗುವುದು. ಇದರಿಂದ ಹೈನುಗಾರಿಕೆ ವಲಯದ ಆರ್ಥಿಕತೆಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.