ADVERTISEMENT

₹ 27 ಸಾವಿರ ದಾಟಿದ ಚಾಲಿ ದರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 20:11 IST
Last Updated 26 ನವೆಂಬರ್ 2019, 20:11 IST
ಶಿರಸಿ ಟಿಎಸ್‌ಎಸ್‌ನ ಅಡಿಕೆ ಮಾರುಕಟ್ಟೆ
ಶಿರಸಿ ಟಿಎಸ್‌ಎಸ್‌ನ ಅಡಿಕೆ ಮಾರುಕಟ್ಟೆ   

ಶಿರಸಿ: ನವೆಂಬರ್ ತಿಂಗಳ ಆರಂಭದಿಂದ ಏರುಮುಖದಲ್ಲಿ ಸಾಗಿರುವ ಚಾಲಿ ಅಡಿಕೆ ದರ ಒಂದು ವಾರದಿಂದ ಮತ್ತಷ್ಟು ತೇಜಿಯಾಗಿದೆ. ವಾರದ ಈಚೆಗೆ ಕ್ವಿಂಟಲ್‌ವೊಂದಕ್ಕೆ ₹1,000ರಂತೆ ಹೆಚ್ಚಾಗಿದೆ.

ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಇದೇ 8ರಂದು ಚಾಲಿ ಅಡಿಕೆ ಕ್ವಿಂಟಲ್‌ಗೆ ₹26,700ಕ್ಕೆ ಮಾರಾಟವಾಗುವ ಮೂಲಕ ಈ ವರ್ಷದ ಹಂಗಾಮಿನಲ್ಲಿ ಗರಿಷ್ಠ ದರ ದಾಖಲಿಸಿತ್ತು. ನಂತರ ಕೊಂಚ ಏರಿಳಿತ ಕಂಡಿದ್ದ ಚಾಲಿಗೆ, ಮಂಗಳವಾರ ಗರಿಷ್ಠ ₹ 27,770 ಬೆಲೆ ದೊರೆತಿದೆ. ಕೆಂಪಡಿಕೆ ಕ್ವಿಂಟಲ್‌ಗೆ ₹30,509ದಿಂದ ₹34,099 ದರ ಲಭ್ಯವಾಗುತ್ತಿದೆ.

‘ಮಂಗಳೂರು ಮಾರುಕಟ್ಟೆಯಲ್ಲಿ ಹಳೇ ಚಾಲಿ ದಾಸ್ತಾನು ಖಾಲಿಯಾಗಿದೆ. ಅತಿಯಾದ ಮಳೆಯ ಕಾರಣಕ್ಕೆ ಕೇರಳ ಮತ್ತು ಮಂಗಳೂರು ಭಾಗದಲ್ಲಿ ಹೊಸ ಚಾಲಿ ಮಾರುಕಟ್ಟೆಗೆ ಬರಲು ವಿಳಂಬವಾಗಿದೆ. ಡಿಸೆಂಬರ್ ವೇಳೆಗೆ ಹೊಸ ಚಾಲಿ ಮಾರುಕಟ್ಟೆಗೆ ಬರುತ್ತದೆ. ಅಲ್ಲಿಯವರೆಗೆ ಈ ದರ ಸಿಗುವ ಸಾಧ್ಯತೆಯಿದೆ’ ಎಂದು ಅಡಿಕೆ ವಹಿವಾಟು ನಡೆಸುವ ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದ್ದಾರೆ.

ADVERTISEMENT

‘ಸಣ್ಣ ಹಿಡುವಳಿದಾರರ ಬಳಿ ಚಾಲಿ ಉತ್ಪನ್ನದ ಸಂಗ್ರಹವಿಲ್ಲ. ಸಾಮಾನ್ಯವಾಗಿ ಸಣ್ಣ ರೈತರು ಹಂಗಾಮಿನ ಆರಂಭದಲ್ಲಿ ಮಾರಾಟ ಮಾಡುತ್ತಾರೆ. ಹೀಗಾಗಿ, ಬೆಲೆ ಏರಿಕೆ ಈ ರೈತರಿಗೆ ಖುಷಿ ತಂದಿಲ್ಲ. ಅಡಿಕೆ ದಾಸ್ತಾನು ಮಾಡಿರುವ ದೊಡ್ಡ ಬೆಳೆಗಾರರು, ವ್ಯಾಪಾರಸ್ಥರಿಗೆ ಅನುಕೂಲ’ ಎಂದು ಬೆಳೆಗಾರ ಕೃಷ್ಣ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.