ADVERTISEMENT

ಸೆನ್ಸೆಕ್ಸ್, ನಿಫ್ಟಿ ಇಳಿಕೆ

ಪಿಟಿಐ
Published 24 ಮೇ 2022, 14:25 IST
Last Updated 24 ಮೇ 2022, 14:25 IST

ಮುಂಬೈ: ದೇಶದ ಷೇರು ಮಾರುಕಟ್ಟೆಗಳಲ್ಲಿ ಸತತ ಎರಡನೆಯ ದಿನವೂ ವಹಿವಾಟು ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ತೇಜಿ ವಹಿವಾಟು ಇಲ್ಲದಿದ್ದುದು, ಆರ್ಥಿಕ ಚೇತರಿಕೆ ಕುರಿತ ಕಳವಳ, ಹಣದುಬ್ಬರವು ಸೂಚ್ಯಂಕಗಳ ಇಳಿಕೆಗೆ ಕಾರಣವಾದವು.

ರೂಪಾಯಿ ದುರ್ಬಲವಾಗಿರುವುದು ಹಾಗೂ ವಿದೇಶಿ ಹೂಡಿಕೆಯ ಹೊರಹರಿವು ಕೂಡ ವಹಿವಾಟಿನ ಮೇಲೆ ಪ್ರಭಾವ ಬೀರಿತು ಎಂದು ವರ್ತಕರು ತಿಳಿಸಿದ್ದಾರೆ.

ವಹಿವಾಟಿನ ಆರಂಭದಲ್ಲಿ ಏರುಗತಿಯಲ್ಲಿ ಇದ್ದ ಸೆನ್ಸೆಕ್ಸ್, ಕೊನೆಯಲ್ಲಿ 236 ಅಂಶ ಕುಸಿಯಿತು. 54,052 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 89 ಅಂಶ ಇಳಿಯಿತು.

ADVERTISEMENT

‘ಅರ್ಥ ವ್ಯವಸ್ಥೆಗಳ ಬೆಳವಣಿಗೆ ನಿಧಾನಗತಿಗೆ ತಿರುಗುತ್ತಿರುವುದು, ಬಡ್ಡಿ ದರ ಹೆಚ್ಚಾಗುತ್ತಿರುವುದು ಹಾಗೂ ಹಣದುಬ್ಬರ ಏರುಗತಿಯಲ್ಲಿ ಇರುವುದು ಜಾಗತಿಕ ಮಾರುಕಟ್ಟೆಗಳನ್ನು ಕಾಡುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಹಾಂಗ್‌ಕಾಂಗ್, ಶಾಂಘೈ, ಸೋಲ್ ಮತ್ತು ಟೋಕಿಯೊ ಷೇರುಪೇಟೆಗಳು ಕೂಡ ಕುಸಿತ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಶೇಕಡ 0.46ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 112.9 ಡಾಲರ್‌ನಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.