ADVERTISEMENT

ಏರಿಕೆ ಕಂಡ ವ್ಯಾಪಾರ ಕೊರತೆ: ಅಕ್ಟೋಬರ್‌ ರಫ್ತು ಶೇ 6, ಆಮದು ಶೇ 12ರಷ್ಟು ಏರಿಕೆ

ಪಿಟಿಐ
Published 15 ನವೆಂಬರ್ 2023, 14:36 IST
Last Updated 15 ನವೆಂಬರ್ 2023, 14:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತದ ವ್ಯಾಪಾರ ಕೊರತೆಯು 2022ರ ಅಕ್ಟೋಬರ್‌ನಲ್ಲಿ ₹2.18 ಲಕ್ಷ ಕೋಟಿಯಷ್ಟು ಇದ್ದಿದ್ದು 2023ರ ಅಕ್ಟೋಬರ್‌ನಲ್ಲಿ ₹ 2.61 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಆಮದು ಮತ್ತು ರಫ್ತು ವಹಿವಾಟಿನ ನಡುವಣ ವ್ಯತ್ಯಾಸವನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ. ಅಕ್ಟೋಬರ್‌ನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ.

ಅಕ್ಟೋಬರ್‌ನಲ್ಲಿ ಆಮದು ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ವ್ಯಾಪಾರ ಕೊರತೆಯು ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಲ್‌. ಸತ್ಯ ಶ್ರೀನಿವಾಸ್‌ ತಿಳಿಸಿದ್ದಾರೆ. ಆದರೆ, ಏಪ್ರಿಲ್‌–ಅಕ್ಟೋಬರ್ ಅವಧಿಯಲ್ಲಿ ವ್ಯಾಪಾರ ಕೊರತೆಯು ₹13.86 ಲಕ್ಷ ಕೋಟಿಯಿಂದ ₹12.20 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ADVERTISEMENT

ರಫ್ತು ವಹಿವಾಟು ಅಕ್ಟೋಬರ್‌ನಲ್ಲಿ ಶೇ 6.21ರಷ್ಟು ಹೆಚ್ಚಾಗಿ ₹2.78 ಲಕ್ಷ ಕೋಟಿಗೆ ತಲುಪಿದೆ. ಆಮದು ವಹಿವಾಟು ಶೇ 12.3ರಷ್ಟು ಏರಿಕೆ ಕಂಡು ₹5.39 ಲಕ್ಷ ಕೋಟಿಗೆ ತಲುಪಿದೆ ಎಂದು ಸಚಿವಾಲಯ ಹೇಳಿದೆ.

ಚಿನ್ನದ ಆಮದು ಹೆಚ್ಚಾಗಿರುವುದೇ ಆಮದು ವಹಿವಾಟು ಹೆಚ್ಚಳಕ್ಕೆ ಕಾರಣ. ಅಕ್ಟೋಬರ್‌ನಲ್ಲಿ ಚಿನ್ನದ ಆಮದು ಶೇ 95.5ರಷ್ಟು ಏರಿಕೆ ಕಂಡಿದ್ದು ಮೌಲ್ಯದ ಲೆಕ್ಕದಲ್ಲಿ ₹60,009 ಕೋಟಿಯಷ್ಟು ಆಗಿದೆ. ಕಚ್ಚಾ ತೈಲ ಆಮದು ಕೂಡಾ ಶೇ 8ರಷ್ಟು ಏರಿಕೆ ಕಂಡು ₹1.46 ಲಕ್ಷ ಕೋಟಿಗೆ ತಲುಪಿದೆ.

ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ರಫ್ತು ವಹಿವಾಟಿಗೆ ಅಡ್ಡಿಯಾಗುತ್ತಿದೆ. ಹಣದುಬ್ಬರ ಮತ್ತು ಜಾಗತಿಕ ಆರ್ಥಿಕತೆಯ ಮಂದಗತಿಯ ಬೆಳವಣಿಗೆಯೂ ದೇಶದ ರಫ್ತು ಮೇಲೆ ನಕಾರಾತ್ಮಕ ‍ಪ್ರಭಾವ ಬೀರುತ್ತಿವೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್‌ ಭರ್ತ್‌ವಾಲ್‌ ಹೇಳಿದ್ದಾರೆ.

ರಫ್ತಿನಲ್ಲಿ ಇರುವ 30 ವಲಯಗಳಲ್ಲಿ 22 ವಲಯಗಳು ಸಕಾರಾತ್ಮಕ ಬೆಳವಣಿಗೆ ಕಂಡಿವೆ. ಕಬ್ಬಿಣದ ಅದಿರು, ಮಾಂಸ, ಡೇರಿ, ಔಷಧ, ಎಲೆಕ್ಟ್ರಾನಿಕ್‌ ಸರಕುಗಳು, ಪ್ಲಾಸ್ಟಿಕ್‌ ಮತ್ತು ಎಂಜಿನಿಯರಿಂಗ್ ವಸ್ತುಗಳ ರಫ್ತು ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ.

ಸೇವೆಗಳ ರಫ್ತು ಹೆಚ್ಚಳ ನಿರೀಕ್ಷೆ

ಅಕ್ಟೋಬರ್‌ನಲ್ಲಿ ಸೇವೆಗಳ ರಫ್ತು ವಹಿವಾಟು ₹2.38 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯನ್ನು ವಾಣಿಜ್ಯ ಸಚಿವಾಲಯ ಮಾಡಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸೇವೆಗಳ ರಫ್ತು ಮೌಲ್ಯವು ₹2.09 ಲಕ್ಷ ಕೋಟಿಯಷ್ಟು ಇತ್ತು. ಆಮದು ವಹಿವಾಟು ₹1.12 ಲಕ್ಷ ಕೋಟಿಯಿಂದ ₹1.18 ಲಕ್ಷ ಕೋಟಿಗೆ ಏರಿಕೆ ಆಗುವ ಅಂದಾಜು ಮಾಡಲಾಗಿದೆ. ಏಪ್ರಿಲ್‌–ಅಕ್ಟೋಬರ್‌ನಲ್ಲಿ ₹ 16 ಲಕ್ಷ ಕೋಟಿ ಮೌಲ್ಯದ ಸೇವೆಗಳನ್ನು ರಫ್ತು ಮಾಡಿರುವ ಅಂದಾಜು ಮಾಡಲಾಗಿದೆ. 2022ರ ಏ‍ಪ್ರಿಲ್‌–ಸೆಪ್ಟೆಂಬರ್‌ನಲ್ಲಿ ₹15 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.