ADVERTISEMENT

ಆರ್ಥಿಕ ನೆರವಿನಿಂದ ವಂಚಿತ ಟೇಲರ್‌ಗಳು

ದರ್ಜಿ ವೃತ್ತಿಯವರಿಗೂ ಧನ ಸಹಾಯಕ್ಕೆ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮೇ 2020, 21:00 IST
Last Updated 6 ಮೇ 2020, 21:00 IST
ಮುಖ ಗವಸು ಹೊಲಿಯುವುದರಲ್ಲಿ ನಿರತ ಟೇಲರ್‌
ಮುಖ ಗವಸು ಹೊಲಿಯುವುದರಲ್ಲಿ ನಿರತ ಟೇಲರ್‌   

ಬೆಂಗಳೂರು: ದರ್ಜಿ ವೃತ್ತಿಯೇ ಕುಲಕ ಸುಬಾಗಿರುವ ಭಾವಸಾರ ಕ್ಷತ್ರಿಯ ಸಮಾಜದವರು ಮತ್ತು ಟೇಲರಿಂಗ್‌ ವೃತ್ತಿಯನ್ನೇ ಅವಲಂಬಿಸಿರುವ ಇತರ ಸಮಾಜದವರೂ ಲಾಕ್‌ಡೌನ್‌ ಕಾರಣಕ್ಕೆ ಆರ್ಥಿಕವಾಗಿ ತೀವ್ರವಾಗಿ ನಲುಗಿ ಹೋಗಿದ್ದರೂ, ಸರ್ಕಾರದ ಆರ್ಥಿಕ ನೆರವಿನಿಂದ ವಂಚಿತಗೊಂಡಿದ್ದಾರೆ.

ರಾಜ್ಯ ಸರ್ಕಾರ ಪ್ರಕಟಿಸಿದ ಆರ್ಥಿಕ ಉತ್ತೇಜನಾ ಕೊಡುಗೆಯಲ್ಲಿ ನೆರವು ಇಲ್ಲದಿರುವುದು ಜೀವನೋಪಾಯಕ್ಕೆ ದರ್ಜಿ ವೃತ್ತಿಯನ್ನೇ ನೆಚ್ಚಿಕೊಂಡಿರುವ ಅಸಂಖ್ಯ ಕುಟುಂಬಗಳಿಗೆ ತೀವ್ರ ನಿರಾಶೆ ಮೂಡಿಸಿದೆ. ಮಾನವೀಯ ನೆಲೆಯಲ್ಲಿ ತಮಗೂ ನೆರವು ನೀಡಬೇಕು ಎಂದು ರಾಜ್ಯದಾದ್ಯಂತ ಇರುವ ಟೇಲರಿಂಗ್‌ ಸಂಘಟನೆಗಳು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿವೆ. ಕರ್ನಾಟಕ ರಾಜ್ಯ ದರ್ಜಿ ಸಹಕಾರ ಮಹಾಮಂಡಳವೂ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದೆ.

ಲಾಕ್‌ಡೌನ್‌ ಭಾಗಶಃ ತೆರವಾಗಿದ್ದರೂ ತಕ್ಷಣಕ್ಕೆ ದುಡಿಮೆಯೇ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ದರ್ಜಿಗಳಿಗೂ ರಾಜ್ಯ ಸರ್ಕಾರ ಹಣಕಾಸು ನೆರವು ನೀಡಲು ಮುಂದಾಗಬೇಕು ಎಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸುಧೀರ್‌ ಎಸ್‌. ನವಲೆ ಅವರು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ADVERTISEMENT

‘ಭಾವಸಾರ ಕ್ಷತ್ರಿಯ ಸಮಾಜದ ಶೇಕಡಾ 40ರಷ್ಟು ಜನರು ದರ್ಜಿ ವೃತ್ತಿಯನ್ನೇ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅಗ್ಗದ ಬೆಲೆಗೆ ಮುಖ ಗವಸು ತಯಾರಿಸಲು ಮುಂದಾ ಗಿರುವ ಸಮುದಾಯದ ದರ್ಜಿಗಳು ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಅವರ ಪಾಲಿಗೆ ಸರ್ಕಾರ ಅಮಾನವೀಯವಾಗಿ ವರ್ತಿಸಿದೆ‘ ಎಂದು ಟೀಕಿಸಿದ್ದಾರೆ.

ಟೇಲರಿಂಗ್‌ ಸಂಘಟನೆಗಳ ಒತ್ತಾಯ: ಇತರ ಶ್ರಮಿಕ ಸಮುದಾಯಕ್ಕೆ ನೆರ ವಾದ ರೀತಿಯಲ್ಲಿಯೇ ಟೇಲರಿಂಗ್‌ ವೃತ್ತಿಯನ್ನೇ ನೆಚ್ಚಿಕೊಂಡವರಿಗೂ ಸರ್ಕಾರ ಮಾನವೀಯತೆ ತೋರಬೇಕು ಎಂದು ದರ್ಜಿ ವೃತ್ತಿಯ ಅನೇಕ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.

ಲಕ್ಷಾಂತರ ದರ್ಜಿಗಳು ಸರ್ಕಾರದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಇದ್ದಾರೆ. ಟೇಲರ್‌ಗಳಿಗೂ ಧನ ಸಹಾಯ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂಬ ಹಕ್ಕೊತ್ತಾಯ ರಾಜ್ಯದ ಎಲ್ಲೆಡೆಯಿಂದ ಕೇಳಿಬರುತ್ತಿದೆ. ದರ್ಜಿಗಳ ಬೇಡಿಕೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ. ಜೆ. ಬದ್ರಿನಾಥ್‌ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.