ADVERTISEMENT

ಸರ್ಕಾರದ ವಹಿವಾಟು: ಖಾಸಗಿ ಬ್ಯಾಂಕ್‌ಗಳಿಗೂ ಅವಕಾಶ

ಪಿಟಿಐ
Published 24 ಫೆಬ್ರುವರಿ 2021, 16:23 IST
Last Updated 24 ಫೆಬ್ರುವರಿ 2021, 16:23 IST

ನವದೆಹಲಿ: ತೆರಿಗೆ ಸಂಗ್ರಹ, ಪಿಂಚಣಿ ಪಾವತಿ ಮತ್ತು ಸಣ್ಣ ಉಳಿತಾಯ ಯೋಜನೆಗಳನ್ನು ನಿಭಾಯಿಸುವುದು ಸೇರಿದಂತೆ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕೇಂದ್ರ ಹಣಕಾಸು ಸಚಿವಾಲಯವು ಎಲ್ಲ ಖಾಸಗಿ ಬ್ಯಾಂಕ್‌ಗಳಿಗೆ ಅವಕಾಶ ಕಲ್ಪಿಸಿದೆ.

ಸರ್ಕಾರಕ್ಕೆ ಸಂಬಂಧಿಸಿದ ಇಂತಹ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳಲು ಈವರೆಗೆ ಕೆಲವು ದೊಡ್ಡ ಖಾಸಗಿ ಬ್ಯಾಂಕ್‌ಗಳಿಗೆ ಮಾತ್ರ ಅವಕಾಶ ಇತ್ತು. ಈಗ ಕೈಗೊಂಡಿರುವ ಕ್ರಮದಿಂದಾಗಿ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಆಗುವ ನಿರೀಕ್ಷೆ ಇದೆ, ಗ್ರಾಹಕ ಸೇವೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ಮತ್ತು ಕ್ಷಮತೆಯನ್ನು ಹೆಚ್ಚಿಸುವ ನಿರೀಕ್ಷೆಯೂ ಇದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

‘ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಖಾಸಗಿ ಬ್ಯಾಂಕ್‌ಗಳು ಇನ್ನು ಮುಂದೆ ಸಮಾನ ಪಾಲುದಾರರಾಗಬಹುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ADVERTISEMENT

‘ಸರ್ಕಾರದ ವಹಿವಾಟುಗಳ ವಿಚಾರದಲ್ಲಿ ಖಾಸಗಿ ಬ್ಯಾಂಕ್‌ಗಳಿಗೆ ಮಾನ್ಯತೆ ನೀಡಲು ಇನ್ನು ಆರ್‌ಬಿಐಗೆ ಯಾವ ನಿರ್ಬಂಧವೂ ಇರುವುದಿಲ್ಲ. ಈ ವಿಚಾರವನ್ನು ಆರ್‌ಬಿಐಗೆ ತಿಳಿಸಲಾಗಿದೆ’ ಎಂದು ಕೂಡ ಪ್ರಕಟಣೆಯಲ್ಲಿ ಹೇಳಲಾಗಿದೆ. ಐಡಿಬಿಐ ಬ್ಯಾಂಕ್‌ ಮಾತ್ರವೇ ಅಲ್ಲದೆ, ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಉದ್ದೇಶ ಇದೆ ಎಂಬುದನ್ನು ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಹೇಳಿದೆ.

‘ಖಾಸಗಿ ವಲಯಕ್ಕೆ ಉತ್ತೇಜನ’

ನವದೆಹಲಿ: ಸರ್ಕಾರದ ಹೊಸ ಕ್ರಮವು ಖಾಸಗಿ ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರದ ಯೋಜನೆಗಳನ್ನು, ವಹಿವಾಟುಗಳನ್ನು ಕೂಡ ನಿಭಾಯಿಸಲು ಹಂತ ಹಂತವಾಗಿ ಅವಕಾಶ ಕಲ್ಪಿಸಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಸರ್ಕಾರದ ವಹಿವಾಟುಗಳನ್ನು ಇನ್ನು ಮುಂದೆ ಖಾಸಗಿ ಬ್ಯಾಂಕ್‌ಗಳೂ ನಡೆಸಬಹುದು ಎಂಬ ತೀರ್ಮಾನವು ಖಾಸಗಿ ಬ್ಯಾಂಕ್‌ ವಲಯಕ್ಕೆ ಉತ್ತೇಜನ ನೀಡುವುದಷ್ಟೇ ಅಲ್ಲದೆ, ದೇಶದ ಅಭಿವೃದ್ಧಿಗೂ ಕೊಡುಗೆ ನೀಡಲಿದೆ. ಹೊಸ ತಂತ್ರಜ್ಞಾನದ ಅನುಷ್ಠಾನಕ್ಕೆ ಮುಂಚೂಣಿಯಲ್ಲಿ ಇರುವ ಖಾಸಗಿ ಬ್ಯಾಂಕ್‌ಗಳಿಗೆ ಸರ್ಕಾರಿ ವೆಚ್ಚಗಳು ಮತ್ತು ಯೋಜನೆಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಜೆ. ಸಾಗರ್ ಅಸೋಸಿಯೇಟ್ಸ್‌ನ ಪಾಲುದಾರ ಅನೀಶ್ ಮಶ್ರೂವಾಲಾ ಅಭಿಪ್ರಾಯಪಟ್ಟಿದ್ದಾರೆ.

ಕೋಟಕ್ ಮಹೀಂದ್ರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಉದಯ್ ಕೋಟಕ್ ಅವರು, ಇದು ಪ್ರಗತಿಪರ ಸುಧಾರಣೆ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.