ADVERTISEMENT

ಎಫ್‌ಪಿಐ: ಜೂನ್‌ 1ರಿಂದ 17ರವರೆಗಿನ ಅವಧಿಯಲ್ಲಿ ₹ 31,430 ಕೋಟಿ ಹೊರಹರಿವು

ಪಿಟಿಐ
Published 19 ಜೂನ್ 2022, 10:31 IST
Last Updated 19 ಜೂನ್ 2022, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜೂನ್‌ 1ರಿಂದ 17ರವರೆಗಿನ ಅವಧಿಯಲ್ಲಿ ಒಟ್ಟಾರೆ ₹ 31,430 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ‌2022ರಲ್ಲಿ ಈವರೆಗೆ ಒಟ್ಟಾರೆ ₹1.98 ಲಕ್ಷ ಕೋಟಿ ಬಂಡವಾಳ ಹಿಂದಕ್ಕೆ ಪಡೆದಂತಾಗಿದೆ. ಸಾಲಪತ್ರ ಮಾರುಕಟ್ಟೆಯಿಂದಲೂ ₹ 2,503 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಫೆಬ್ರುವರಿಯಿಂದಲೂ ಸಾಲಪತ್ರ ಮಾರುಕಟ್ಟೆಯಿಂದ ಬಂಡವಾಳ ಹೊರಹರಿವು ಆಗುತ್ತಿದೆ.

ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಹೆಚ್ಚಳ, ಹಣದುಬ್ಬರ ಏರಿಕೆ ಹಾಗೂ ಷೇರುಗಳ ಮೌಲ್ಯವು ಗರಿಷ್ಠ ಮಟ್ಟದಲ್ಲಿ ಇರುವ ಕಾರಣಗಳಿಂದಾಗಿ ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಭಾರತದ ಷೇರುಪೇಟೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

2021ರ ಅಕ್ಟೋಬರ್‌ನಿಂದಲೂ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುತ್ತಿದ್ದಾರೆ.

‘ಜಾಗತಿಕ ಬಿಕ್ಕಟ್ಟು, ಹಣದುಬ್ಬರ ಏರಿಕೆ, ಕೇಂದ್ರೀಯ ಬ್ಯಾಂಕ್‌ಗಳು ಹಣಕಾಸು ನೀತಿ ಬಿಗಿಗೊಳಿಸುತ್ತಿರುವುದು ಸೇರಿದಂತೆ ಇನ್ನೂ ಹಲವು ಕಾರಣಗಳಿಂದಾಗಿ ಮುಂದಿನ ದಿನಗಳಲ್ಲಿಯೂ ಬಂಡವಾಳ ಹರಿವು ಅಸ್ಥಿರವಾಗಿರಲಿದೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಈಕ್ವಿಟಿ ರಿಸರ್ಚ್‌ನ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

‘ಅಮೆರಿಕದ ಡಾಲರ್ ಮೌಲ್ಯ ವೃದ್ಧಿ ಹಾಗೂ ಬಾಂಡ್‌ ಗಳಿಕೆಯು ಎಫ್‌ಪಿಐ ಮಾರಾಟಕ್ಕೆ ಪ್ರಮುಖ ಕಾರಣಗಳಾಗಿವೆ. ಅಮೆರಿಕದ ಫೆಡರಲ್‌ ರಿಸರ್ವ್ ಸೇರಿದಂತೆ ಜಾಗತಿಕವಾಗಿ ಹಲವು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಿಸಿವೆ. ಇದರಿಂದಾಗಿ ಈಕ್ವಿಟಿಯಿಂದ ಬಾಂಡ್‌ಗಳ ಕಡೆಗೆ ಹಣವು ಹರಿಯುತ್ತಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ತಿಳಿಸಿದ್ದಾರೆ.

ದೇಶದಲ್ಲಿಯೂ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಇರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಆರ್‌ಬಿಐ ಸಹ ಬಡ್ಡಿದರ ಹೆಚ್ಚಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.