ADVERTISEMENT

ಕೇಂದ್ರವು ತೆರಿಗೆ ಕಡಿತ ಮಾಡದಿದ್ದರೂ ಇಳಿಯಲಿದೆ ಪೆಟ್ರೋಲ್, ಡೀಸೆಲ್ ಬೆಲೆ

ಅನ್ನಪೂರ್ಣ ಸಿಂಗ್
Published 21 ಜುಲೈ 2021, 18:00 IST
Last Updated 21 ಜುಲೈ 2021, 18:00 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೇಂದ್ರವು ಕಡಿತಗೊಳಿಸದಿದ್ದರೂ ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ.

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಮತ್ತು ಅದರ ಮಿತ್ರರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿರುವುದು ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಕುಸಿಯುತ್ತಿರುವುದರಿಂದ ಇಂಧನ ಬೆಲೆಗಳು ಇನ್ನೂ ಕಡಿಮೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ತೈಲ ಬೆಲೆಯಲ್ಲಿ ಬುಧವಾರ ಇಳಿಕೆಯಾಗಿದೆ. ಮಂಗಳವಾರ ಶೇ. 1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಬ್ರೆಂಟ್ ಕಚ್ಚಾ ತೈಲ ಬುಧವಾರ ಶೇ 0.8 ರಷ್ಟು ಕುಸಿದು ಬ್ಯಾರೆಲ್‌ಗೆ ಸುಮಾರು 69 ಡಾಲರ್‌ಗೆ ತಲುಪಿದೆ.

ADVERTISEMENT

ಕಚ್ಚಾ ತೈಲ ಬೆಲೆಯು ಸೋಮವಾರ ತೀವ್ರವಾಗಿ ಕುಸಿತ ಕಂಡಿತ್ತು. ತಿಂಗಳ ಆರಂಭದಲ್ಲಿ ಬ್ಯಾರೆಲ್‌ಗೆ 76 ಡಾಲರ್ ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದ ಕಚ್ಚಾ ತೈಲ ದರ ಸೋಮವಾರ ಬ್ಯಾರೆಲ್‌ಗೆ 67 ಡಾಲರ್‌ಗೆ ಇಳಿದಿತ್ತು.

‘ಉತ್ಪಾದನೆಯನ್ನು ಹೆಚ್ಚಿಸಲು ಒಪೆಕ್ + ದೇಶಗಳು ಒಪ್ಪಿದ ನಂತರ ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗುತ್ತಿದೆ. ಕೊರೊನಾ ವೈರಸ್‌ನ ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರ ಮತ್ತು ಪ್ರಪಂಚದಾದ್ಯಂತದ ಹಲವಾರು ದೇಶಗಳಲ್ಲಿನ ಹೊಸ ನಿರ್ಬಂಧಗಳಿಂದಾಗಿ ಇಂಧನ ಬೇಡಿಕೆಯ ದೃಷ್ಟಿಕೋನದ ಬಗ್ಗೆ ಹೆಚ್ಚುತ್ತಿರುವ ಕಳವಳದಿಂದಾಗಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ.’ ಎಂದು ಕೆಡಿಯಾ ಕಮಾಡಿಟೀಸ್‌ನ ಅಜಯ್ ಕುಮಾರ್ ಕೆಡಿಯಾ ಹೇಳಿದರು.

ಒಪೆಕ್ ಮತ್ತು ಅದರ ಮಿತ್ರ ರಾಷ್ಟ್ರಗಳು ಜಾಗತಿಕ ತೈಲ ಉತ್ಪಾದನೆಯನ್ನು ದಿನಕ್ಕೆ 4,00,000 ಬ್ಯಾರೆಲ್‌ಗೆ ಹೆಚ್ಚಿಸಲು ಒಪ್ಪಿಕೊಂಡಿವೆ. ಕೋವಿಡ್ -19 ಆರಂಭದಲ್ಲಿ ಉತ್ಪಾದನೆಯನ್ನು ಮಾಡಿದ್ದ ಎಲ್ಲ ಕಡಿತವನ್ನು ಪುನಃಸ್ಥಾಪಿಸಲು ಆ ದೇಶಗಳು ಬದ್ಧವಾಗಿವೆ.

ಹೊಸ ಕೋವಿಡ್ ಪ್ರಕರಣಗಳಿಂದಾಗಿ ಉತ್ಪಾದನೆ ಮತ್ತು ಕಡಿಮೆ ಬೇಡಿಕೆಯಿಂದಾಗಿ ಕಚ್ಚಾ ತೈಲದ ಬೆಲೆ ತನ್ನಷ್ಟಕ್ಕೆ ತಾನೆ ಕಡಿಮೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.