ಬೆಂಗಳೂರು: ‘ಕರ್ನಾಟಕವು 2029ರ ವೇಳೆಗೆ ಹೊಸದಾಗಿ 500 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಆಕರ್ಷಿಸುವ ಗುರಿ ಹೊಂದಿದೆ. ಇದರಿಂದ 3.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಐ.ಟಿ ಮತ್ತು ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಶುಕ್ರವಾರ ಕರ್ನಾಟಕದ ಜಿಸಿಸಿ ಕರಡು ನೀತಿ ಬಿಡುಗಡೆಗೊಳಿಸಿದ ಬಳಿಕ ಅವರು ಮಾತನಾಡಿದರು.
‘ಜಾಗತಿಕ ಸಾಮರ್ಥ್ಯ ಕೇಂದ್ರಗಳ ಮೂಲಕ ಆರ್ಥಿಕ ಉತ್ಪಾದನೆಯಲ್ಲಿ 50 ಬಿಲಿಯನ್ ಡಾಲರ್ (₹4.18 ಲಕ್ಷ ಕೋಟಿ) ಗುರಿ ತಲುಪಲಾಗುವುದು ಎಂದು ವಿವರಿಸಿದರು.
ಕರ್ನಾಟಕವು ದೇಶದಲ್ಲಿಯೇ ಮೊದಲ ಜಿಸಿಸಿ ನೀತಿ ಜಾರಿಗೆ ಮುಂದಾಗಿದೆ. ಕರಡು ಪ್ರತಿಯು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಪ್ರತಿಕ್ರಿಯೆ ಸಲ್ಲಿಸಲು ನವೆಂಬರ್ 11ರ ವರೆಗೆ ಅವಕಾಶ ನೀಡಲಾಗಿದೆ. ನಾಗರಿಕರು, ಉದ್ಯಮದ ತಜ್ಞರು, ಸಮುದಾಯ ಸಂಘಟನೆಗಳು ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಕ್ಯುಆರ್ ಕೋಡ್ ಮೂಲಕ ಪ್ರತಿಕ್ರಿಯೆ, ಸಲಹೆ ನೀಡಬಹುದಾಗಿದೆ ಎಂದು ತಿಳಿಸಿದರು.
ದೇಶದ ಜಿಸಿಸಿಗಳಲ್ಲಿ ಸುಮಾರು 5.70 ಲಕ್ಷ ವೃತ್ತಿಪರರಿದ್ದಾರೆ. ಈ ಪೈಕಿ ಬೆಂಗಳೂರು ಶೇ 39ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ 570 ಜಿಸಿಸಿಗಳಿವೆ ಎಂದು ವಿವರಿಸಿದರು.
ಮೈಸೂರು, ಶಿವಮೊಗ್ಗ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ನ್ಯಾನೊ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಐ.ಟಿ ಮತ್ತು ಬಿ.ಟಿ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್ ಅವರು, ಜಿಸಿಸಿ ನೀತಿ ಬಗ್ಗೆ ವಿವರಿಸಿದರು. ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಇದ್ದರು.
ಎ.ಐ ಕೌಶಲ ಮಂಡಳಿ ಸ್ಥಾಪನೆ
‘ಬೆಂಗಳೂರು ಮತ್ತು ಬೆಂಗಳೂರಿನ ಹೊರವಲಯದಲ್ಲಿ ಮೂರು ಹೊಸ ಟೆಕ್ ಪಾರ್ಕ್ ಸ್ಥಾಪನೆ ಮೂಲಕ ಜಾಗತಿಕ ನಾವೀನ್ಯ ಜಿಲ್ಲೆಗಳ ರಚನೆಗೆ ನಿರ್ಧರಿಸಲಾಗಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗೆ ₹100 ಕೋಟಿ ಆವಿಷ್ಕಾರ ನಿಧಿ ಸ್ಥಾಪಿಸಲಾಗುವುದು. ಕೃತಕ ಬುದ್ಧಿಮತ್ತೆಗೆ ಉತ್ತೇಜನ ನೀಡಲು ಉತ್ಕೃಷ್ಟತಾ ಕೇಂದ್ರ ಮತ್ತು ಎ.ಐ ಕೌಶಲ ಮಂಡಳಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.