ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ‘ಜಿಸಿಸಿ ಲೀಡರ್ಸ್ ಕನೆಕ್ಟ್’ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಬೆಂಬಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್‌ಬಿಐ), ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಜೊತೆಗೆ ತಿಳಿವಳಿಕೆ ಒಪ್ಪಂದ ಪತ್ರಕ್ಕೆ ಅಂಕಿತ ಹಾಕಿದೆ.
ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಅವರ ಸಮ್ಮುಖದಲ್ಲಿ ಬ್ಯಾಂಕ್‌ನ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ ಮತ್ತು ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಸಹಿ ಹಾಕಿದರು.
ರಾಜ್ಯದಲ್ಲಿ ಜಿಸಿಸಿಗಳನ್ನು ಸಕ್ರಿಯಗೊಳಿಸುವ ಮತ್ತು ಸಬಲೀಕರಣಗೊಳಿಸುವ ಗುರಿಗೆ ಈ ಒಪ್ಪಂದವು ನೆರವಾಗಲಿದೆ. ಬೆಂಗಳೂರಿನಲ್ಲಿ ದೇಶದ ಮೊದಲ ವಿಶಿಷ್ಟ ಜಿಸಿಸಿ ಕೇಂದ್ರ ತೆರೆಯಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಜಿಸಿಸಿ, ನವೋದ್ಯಮ ಮತ್ತು ಐ.ಟಿ–ಬಿ.ಟಿ ವಲಯದ ಪ್ರಮುಖ ನೇಮಕಾತಿಗೆ ಪರಿಹಾರ ಒದಗಿಸುವ ಜ್ಯೋಯಿನ್ ಗ್ರೂಪ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೆಸ್ಟರ್ನ್ ಡಿಜಿಟಲ್ ನಿರ್ದೇಶಕ ವೀರ ಲೋಕೇಶ್, ಬಾಯರ್ ಇಂಡಿಯಾದ ರಾಷ್ಟ್ರೀಯ ಮುಖ್ಯಸ್ಥೆ ಶಾರದಾ, ಡೆಲಾಯ್ಟ್ ಸಂಸ್ಥೆಯ ಪಾಲುದಾರ ಆದಿತ್ಯ ಮೀನಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.