ಜಿಡಿಪಿ
ನವದೆಹಲಿ ): 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಆರ್ಥಿಕ ಉತ್ಪನ್ನವು (ಜಿಡಿಪಿ) ನಾಲ್ಕು ವರ್ಷದ ಕನಿಷ್ಠ ಮಟ್ಟವಾದ ಶೇ 6.5ರಷ್ಟು ದಾಖಲಾಗಿದೆ.
2023–24ರಲ್ಲಿ ಶೇ 9.2ರಷ್ಟು ಪ್ರಗತಿ ಕಂಡಿತ್ತು. ತಯಾರಿಕಾ ವಲಯದ ಬೆಳವಣಿಗೆ ಕುಸಿತವೇ ಈ ಇಳಿಕೆಗೆ ಕಾರಣ ಎಂದು ಶುಕ್ರವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ಹೇಳಿದೆ.
ದೇಶದ ಒಟ್ಟು ಜಿಡಿಪಿ ಗಾತ್ರ 330.68 ಲಕ್ಷ ಕೋಟಿ ಅಥವಾ 3.9 ಟ್ರಿಲಿಯನ್ ಡಾಲರ್‌ಗೆ ಮುಟ್ಟಿದೆ. ಮುಂದಿನ ಕೆಲವು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ದಾಟುವ ಗುರಿ ಹೊಂದಲಾಗಿದೆ ಎಂದು ಹೇಳಿದೆ.
ಮುಂದಿನ ಆರ್ಥಿಕ ವರ್ಷವನ್ನು ಅದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಲು ಜಿಡಿಪಿಯನ್ನು ಮಾರುಕಟ್ಟೆ ದರಗಳಲ್ಲಿ ಲೆಕ್ಕ ಹಾಕುವುದಕ್ಕೆ ಸಾಂಕೇತಿಕ (ನಾಮಿನಲ್) ಜಿಡಿಪಿ ಎಂದು ಕರೆಯುತ್ತಾರೆ. 2023–24ರಲ್ಲಿ ಸಾಂಕೇತಿಕ ಜಿಡಿಪಿ ಗಾತ್ರವು ₹301.23 ಲಕ್ಷ ಕೋಟಿ ಇತ್ತು. 2024–25ರಲ್ಲಿ ₹330.68 ಲಕ್ಷ ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ ಬೆಳವಣಿಗೆಯು ಶೇ 9.8ರಷ್ಟು ಏರಿಕೆ ಕಂಡಿದೆ.
2023–24ರಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟಾರೆ ಮೌಲ್ಯ ಸೇರ್ಪಡೆಯು (ಜಿವಿಎ) ₹274.13 ಲಕ್ಷ ಕೋಟಿ ಇತ್ತು. 2024–25ರಲ್ಲಿ ₹300.22 ಲಕ್ಷ ಕೋಟಿ ಆಗಿದೆ. ಒಟ್ಟಾರೆ ಶೇ 9.5ರಷ್ಟು ಹೆಚ್ಚಳವಾಗಿದೆ.
2024–25ನೇ ಪೂರ್ಣ ಆರ್ಥಿಕ ವರ್ಷದ ಜಿಡಿಪಿ ಕುಸಿತದಲ್ಲಿ ತಯಾರಿಕಾ ವಲಯದ ಇಳಿಕೆ ಪಾಲು ಹೆಚ್ಚಿದೆ. 2023–24ರಲ್ಲಿ ಶೇ 12.3ರಷ್ಟಿದ್ದ ಈ ವಲಯದ ಬೆಳವಣಿಗೆಯು 2024–25ರಲ್ಲಿ ಶೇ 4.5ಕ್ಕೆ ತಗ್ಗಿದೆ. ಆದಾಗ್ಯೂ ಕೃಷಿ ವಲಯ ಬೆಳವಣಿಗೆಯು ಶೇ 2.7ರಿಂದ ಶೇ 4.6ರಷ್ಟು ಏರಿಕೆ ಕಂಡಿದೆ ಎಂದು ಎನ್‌ಎಸ್‌ಒ ತಿಳಿಸಿದೆ. 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ತಯಾರಿಕಾ ವಲಯವು ಶೇ 4.8ರಷ್ಟು ಬೆಳವಣಿಗೆ ಕಂಡಿದೆ. 2023–24ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಶೇ 11.3ರಷ್ಟು ಪ್ರಗತಿ ಕಂಡಿತ್ತು. ಇದಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. ನಿರ್ಮಾಣ ವಲಯವು ಶೇ 8.7ರಿಂದ ಶೇ 10.8ರಷ್ಟು ಹಾಗೂ ಕೃಷಿ ವಲಯವು ಶೇ 0.9ರಿಂದ ಶೇ 5.4ರಷ್ಟು ಪ್ರಗತಿ ಕಂಡಿದೆ. ವಿದ್ಯುತ್ ಅನಿಲ ನೀರು ಪೂರೈಕೆ ಸೇರಿ ಇತರೆ ಉಪಯುಕ್ತ ವಲಯಗಳ ಬೆಳವಣಿಗೆಯು ಧನಾತ್ಮಕವಾಗಿದೆ. ಆದರೆ ವ್ಯಾಪಾರ ಹೋಟೆಲ್ ಸಾರಿಗೆ ಸಂವಹನ ಮತ್ತು ಸೇವಾ ವಲಯದ ಬೆಳವಣಿಗೆಯು ಶೇ 6.2ರಿಂದ ಶೇ 6ಕ್ಕೆ ತಗ್ಗಿದೆ. ಹಣಕಾಸು ರಿಯಲ್ ಎಸ್ಟೇಟ್ ವೃತ್ತಿಪರ ಸೇವಾ ವಲಯದ ಪ್ರಗತಿಯು ಶೇ 9ರಿಂದ ಶೇ 7.8ಕ್ಕೆ ಇಳಿಕೆಯಾಗಿದೆ. ಸಾರ್ವಜನಿಕ ಆಡಳಿತ ರಕ್ಷಣೆ ಸೇರಿ ಇತರೆ ಸೇವಾ ವಲಯದ ಬೆಳವಣಿಗೆಯು ಶೇ 8.7ರಷ್ಟು ದಾಖಲಾಗಿದ್ದು ಸ್ಥಿರವಾಗಿದೆ.
ಶೇ 7.4ರಷ್ಟು ಪ್ರಗತಿ 2024-25ನೇ ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 7.4ರಷ್ಟು ಪ್ರಗತಿ ದಾಖಲಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 6.4ರಷ್ಟು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಏರಿಕೆ ಕಂಡಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 5.6ರಷ್ಟು ಹಾಗೂ ಜೂನ್ ತ್ರೈಮಾಸಿಕದಲ್ಲಿ ಶೇ 6.5ರಷ್ಟು ಪ್ರಗತಿ ಕಂಡಿದೆ ಎಂದು ಎನ್‌ಎಸ್‌ಒ ವರದಿ ವಿವರಿಸಿದೆ. 2023–24ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ 8.4ರಷ್ಟು ಪ್ರಗತಿ ಕಂಡಿತ್ತು. ಇದಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳಿನಲ್ಲಿ ಚೀನಾದ ಆರ್ಥಿಕತೆಯು ಶೇ 5.4ರಷ್ಟು ಬೆಳವಣಿಗೆ ದಾಖಲಿಸಿದೆ.
ನವದೆಹಲಿ: 2024–25ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ವಿತ್ತೀಯ ಕೊರತೆಗೆ ನಿಗದಿಪಡಿಸಿದ್ದ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಶುಕ್ರವಾರ ಬಿಡುಗಡೆಯಾಗಿರುವ ಲೆಕ್ಕಪತ್ರಗಳ ಮಹಾನಿಯಂತ್ರಕರ (ಸಿಜಿಎ) ವರದಿ ತಿಳಿಸಿದೆ. ಫೆಬ್ರುವರಿಯಲ್ಲಿ ಸರ್ಕಾರವು ಸಂಸತ್‌ನಲ್ಲಿ ಮಂಡಿಸಿದ್ದ ಪರಿಷ್ಕೃತ ವರದಿಯಲ್ಲಿ 2024–25ನೇ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.8ಕ್ಕೆ ನಿಗದಿಪಡಿಸಿತ್ತು. ಮೌಲ್ಯದ ಲೆಕ್ಕದಲ್ಲಿ ಇದು ₹15.69 ಲಕ್ಷ ಕೋಟಿ ಆಗಿದೆ.
ಭಾರತದ ಆರ್ಥಿಕತೆ ಬೆಳವಣಿಗೆ ವೇಗವು ಸುಸ್ಥಿರವಾಗಿದೆ. ಸತತ ನಾಲ್ಕನೇ ವರ್ಷವೂ ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗದ ಆರ್ಥಿಕತೆಯಾಗಿ ಮುಂದುವರಿದಿದೆನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ.
2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲು ತಯಾರಿಕಾ ವಲಯವು ವಾರ್ಷಿಕವಾಗಿ ಶೇ 15ರಷ್ಟು ಬೆಳವಣಿಗೆ ಸಾಧಿಸಬೇಕಿದೆಬಿ.ವಿ.ಆರ್. ಸುಬ್ರಹ್ಮಣ್ಯಂ, ಸಿಇಒ, ನೀತಿ ಆಯೋಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.