ADVERTISEMENT

ಏರಿಕೆ ಹಾದಿಯಲ್ಲಿ ಚಿನ್ನ: 2021ರ ಅಂತ್ಯಕ್ಕೆ 10 ಗ್ರಾಂಗೆ ₹ 82 ಸಾವಿರ?

ಪಿಟಿಐ
Published 25 ಏಪ್ರಿಲ್ 2020, 2:35 IST
Last Updated 25 ಏಪ್ರಿಲ್ 2020, 2:35 IST
   

ನವದೆಹಲಿ: ಚಿನ್ನದ ವಾಯಿದಾ ವಹಿವಾಟಿನ ಬೆಲೆಯು ಶುಕ್ರವಾರ ಪ್ರತಿ ಗ್ರಾಂಗೆ ₹ 315ರಂತೆ ಹೆಚ್ಚಳಗೊಂಡು ₹ 46,742ಕ್ಕೆ ತಲುಪಿದೆ. ಬಹು ಪದಾರ್ಥಗಳ ವಿನಿಮಯ ಕೇಂದ್ರದಲ್ಲಿ ಜೂನ್‌ ವಾಯಿದಾ ಗುತ್ತಿಗೆಯ ಬೆಲೆಯು ಏರಿಕೆ ದಾಖಲಿಸಿದೆ. ಸತತ ಮೂರನೇ ದಿನವೂ ಬೆಲೆ ಏರಿಕೆ ಕಂಡಿದೆ.

ಜಾಗತಿಕ ಮಟ್ಟದಲ್ಲಿಯೂ ಚಿನ್ನದ ಬೆಲೆ ಏರಿಕೆ ಹಾದಿಯಲ್ಲಿ ಇದೆ. ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್‌ಗೆ (28.34 ಗ್ರಾಂ) ₹ 1.32 ಲಕ್ಷ ಬೆಲೆಗೆ ವಹಿವಾಟು ನಡೆದಿದೆ. ಈ ಲೆಕ್ಕದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ₹ 4,683 ಮತ್ತು 10 ಗ್ರಾಂಗೆ ₹ 46,830 ರಷ್ಟಾಗುತ್ತದೆ.

ಅಕ್ಷಯ ತೃತೀಯ: ಇದೇ ಭಾನುವಾರ ನಡೆಯಲಿರುವ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸುವುದು ಅನೇಕರ ಪಾಲಿಗೆ ಶುಭದಿನವಾಗಿದೆ. ಈ ಬಾರಿ ಲಾಕ್‌ಡೌನ್‌ ಕಾರಣಕ್ಕೆ ಚಿನ್ನಾಭರಣಗಳ ನೇರ ಖರೀದಿಗೆ ಅವಕಾಶವೇ ಇಲ್ಲದಂತಾಗಿದೆ. ಹೀಗಾಗಿ ಜನಪ್ರಿಯ ಬ್ರ್ಯಾಂಡೆಡ್‌ ಚಿನ್ನಾಭರಣ ಮಳಿಗೆಗಳು ಮತ್ತು ಮೊಬೈಲ್‌ ವಾಲೆಟ್‌ ಕಂಪನಿಗಳು ಆನ್‌ಲೈನ್‌ನಲ್ಲಿ ಚಿನ್ನ ಖರೀದಿಗೆ ಅವಕಾಶ ಕಲ್ಪಿಸಿವೆ.

ADVERTISEMENT

ಪೇಟಿಎಂ ಕೊಡುಗೆ: ಅಕ್ಷಯ ತೃತೀಯ ಸಂದರ್ಭಕ್ಕೆಂದೇ ಡಿಜಿಟಲ್‌ ವಾಲೆಟ್‌ ಕಂಪನಿ ಪೇಟಿಎಂ, ತನ್ನ ಆ್ಯಪ್‌ ಮೂಲಕ ಕನಿಷ್ಠ ₹ 1 ಗೂ ಚಿನ್ನ ಖರೀದಿಸಲು ಅವಕಾಶ ಕಲ್ಪಿಸಿದೆ.

ಎಂಎಂಟಿಸಿ ಜತೆಗಿನ ಸಹಭಾಗಿತ್ವದಲ್ಲಿ ಶೇ 99.99 ಶುದ್ಧತೆಯ 24 ಕ್ಯಾರಟ್‌ನ ಚಿನ್ನ ಮಾರಾಟ ಮಾಡಲಿದೆ. ಗ್ರಾಹಕರು ಖರೀದಿಸುವ ಚಿನ್ನವನ್ನು ಚಿನ್ನದ ಲಾಕರ್‌ಗಳಲ್ಲಿ ಸುರಕ್ಷಿತವಾಗಿ ಇರಿಸಲಾಗುವುದು. ಲಾಕ್‌ಡೌನ್‌ ಮುಗಿದ ನಂತರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಕಂಪನಿ ತಿಳಿಸಿದೆ.

2021ರ ಅಂತ್ಯಕ್ಕೆ 10 ಗ್ರಾಂಗೆ ₹ 82 ಸಾವಿರ?: ಬ್ಯಾಂಕ್‌ ಆಫ್‌ ಅಮೆರಿಕ ಸೆಕ್ಯುರೀಟಿಸ್‌ನ ವಿಶ್ಲೇಷಣೆ ಪ್ರಕಾರ, 2021ರ ಅಂತ್ಯಕ್ಕೆ ತಲಾ 10 ಗ್ರಾಂ ಚಿನ್ನದ ಬೆಲೆಯು ಸದ್ಯದ ಕರೆನ್ಸಿ ವಿನಿಮಯ ದರದ ಪ್ರಕಾರ ₹ 82 ಸಾವಿರಕ್ಕೆ ತಲುಪಲಿದೆ.

ಷೇರು ಮತ್ತು ಬಾಂಡ್‌ಗಳಲ್ಲಿನ ಹೂಡಿಕೆ ಹೆಚ್ಚಿನ ಪ್ರತಿಫಲ ನೀಡದಿರುವ ಕಾರಣಕ್ಕೆ ಹೂಡಿಕೆದಾರರು ಚಿನ್ನದತ್ತ ಗಮನ ಹರಿಸಲಿದ್ದಾರೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನದ ಬೆಲೆ ₹2.28 ಲಕ್ಷಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.