ADVERTISEMENT

Gold rates: ಸತತ ಎರಡನೇ ದಿನ ಚಿನ್ನದ ದರ ಇಳಿಕೆ

ಪಿಟಿಐ
Published 15 ಮೇ 2025, 12:51 IST
Last Updated 15 ಮೇ 2025, 12:51 IST
<div class="paragraphs"><p>ಚಿನ್ನ</p></div>

ಚಿನ್ನ

   

ನವದೆಹಲಿ: ಸತತ ಎರಡನೇ ದಿನವಾದ ಗುರುವಾರದ ವಹಿವಾಟಿನಲ್ಲಿ ಚಿನ್ನದ ಬೆಲೆಯು ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.

ಅಮೆರಿಕ ಮತ್ತು ಚೀನಾವು ಸುಂಕ ಸಮರಕ್ಕೆ 90 ದಿನಗಳವರೆಗೆ ತಾತ್ಕಾಲಿಕ ವಿರಾಮ ನೀಡಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ತಲೆದೋರಿದ್ದ ಸುಂಕ ಸಮರದ ಭೀತಿ ಕ್ಷೀಣಿಸಿದೆ. ಹಾಗಾಗಿ, ಹಳದಿ ಲೋಹದ ಬೆಲೆಯು ಇಳಿಕೆಯ ಹಾದಿ ಹಿಡಿದಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ADVERTISEMENT

10 ಗ್ರಾಂ ಚಿನ್ನದ (ಶೇ 99.9 ಪರಿಶುದ್ಧತೆ) ಬೆಲೆಯು ₹1,800 ಇಳಿಕೆಯಾಗಿದ್ದು, ₹95,050 ಆಗಿದೆ. ಆಭರಣ ಚಿನ್ನದ (ಶೇ 99.5 ಪರಿಶುದ್ಧತೆ) ದರವು ಇಷ್ಟೇ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ₹94,600ಕ್ಕೆ ಮಾರಾಟವಾಗಿದೆ. 

ಸತತ ನಾಲ್ಕನೇ ದಿನದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಇಳಿಕೆಯಾಗಿದೆ. ಪ್ರತಿ ಕೆ.ಜಿಗೆ ₹1 ಸಾವಿರ ದರ ಇಳಿಕೆಯಾಗಿದ್ದು, ₹97 ಸಾವಿರ ಆಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತಣ್ಣಗಾಗಿದೆ. ಸಿರಿಯಾ ಮೇಲೆ ಹೇರಿದ್ದ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ಜಾಗತಿಕ ಬೆಳವಣಿಗೆಯು ಹಳದಿ ಲೋಹದ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ. 

ಜಾಗತಿಕ ಮಟ್ಟದಲ್ಲೂ ಚಿನ್ನದ ಧಾರಣೆಯು ಇಳಿಕೆಯಾಗಿದೆ. ಪ್ರತಿ ಔನ್ಸ್‌ (28.34 ಗ್ರಾಂ) ಬಂಗಾರದ ದರವು ಶೇ 0.53ರಷ್ಟು ಇಳಿಕೆಯಾಗಿದೆ. ಪ್ರತಿ ಔನ್ಸ್‌ ಬೆಲೆ 3,160 ಡಾಲರ್‌ (₹2.70 ಲಕ್ಷ) ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.