ನವದೆಹಲಿ: ಒಂದು ವರ್ಷದ ಬಳಿಕ ಮಾರಾಟ ಮಾಡುವ ಷೇರುಗಳಿಂದ ಬರುವ ಲಾಭದ ಮೇಲೆ ವಿಧಿಸುವ ದೀರ್ಘಾವಧಿ ಬಂಡವಾಳ ಗಳಿಕೆ ಮೇಲಿನ ತೆರಿಗೆ (ಎಲ್‌ಟಿಸಿಜಿ) ಮೂಲಕ, 2022–23ನೇ ಆರ್ಥಿಕ ವರ್ಷದಲ್ಲಿ ₹98,861 ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2018ರ ಏಪ್ರಿಲ್‌ನಿಂದ ಷೇರುಗಳು ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮಾರಾಟಕ್ಕೆ ಈ ತೆರಿಗೆ ಅನ್ವಯವಾಗುತ್ತದೆ. ಷೇರುಗಳಿಂದ ಬರುವ ಲಾಭದ ವಾರ್ಷಿಕ ಮೊತ್ತವು ₹1 ಲಕ್ಷ ಇದ್ದರೆ ತೆರಿಗೆ ವಿನಾಯಿತಿ ದೊರೆಯಲಿದೆ. ಇದಕ್ಕಿಂತ ಹೆಚ್ಚಿಗೆ ಇದ್ದರೆ ಅದಕ್ಕೆ ಶೇ 10ರಷ್ಟು ತೆರಿಗೆ ಪಾವತಿಸಬೇಕಿದೆ.
2021–22ನೇ ಆರ್ಥಿಕ ವರ್ಷದಲ್ಲಿ ₹86,075 ಕೋಟಿ ತೆರಿಗೆ ಸಂಗ್ರಹಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ 15ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಸರ್ಕಾರವು ಈ ತೆರಿಗೆಯಡಿ 2018–19ರಲ್ಲಿ ₹29,220 ಕೋಟಿ, 2019–20ರಲ್ಲಿ ₹26,008 ಕೋಟಿ ಹಾಗೂ 2020–21ರಲ್ಲಿ ₹38,589 ಕೋಟಿ ತೆರಿಗೆ ಸಂಗ್ರಹಿಸಿದೆ ಎಂದು ಸಚಿವರು ವಿವರಿಸಿದ್ದಾರೆ.
‘2024–25ನೇ ಆರ್ಥಿಕ ವರ್ಷದಲ್ಲಿ ಎಲ್‌ಟಿಸಿಜಿ ರದ್ದುಪಡಿಸುವ ಯಾವುದೇ ಪ್ರಸ್ತಾವವು ಸರ್ಕಾರದ ಮುಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸಕ್ತ ಆರ್ಥಿಕ ಸಾಲಿನ ಬಜೆಟ್‌ನಲ್ಲಿ ಷೇರುಗಳು ಮತ್ತು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮಾರಾಟದ ಮೇಲೆ ವಿಧಿಸುವ ಎಲ್‌ಟಿಸಿಜಿಯನ್ನು ಶೇ 10ರಿಂದ ಶೇ 12.5ಕ್ಕೆ ಹೆಚ್ಚಿಸಲಾಗಿದೆ. ತೆರಿಗೆ ವಿನಾಯಿತಿ ಮೊತ್ತವನ್ನು ₹1 ಲಕ್ಷದಿಂದ ₹1.25 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.