ADVERTISEMENT

ಮೊದಲು ದೇಶದಲ್ಲೇ ತಯಾರಿಕೆ ಆರಂಭಿಸಿ: ಟೆಸ್ಲಾಗೆ ಸರ್ಕಾರ ಸೂಚನೆ

ಪಿಟಿಐ
Published 11 ಸೆಪ್ಟೆಂಬರ್ 2021, 21:47 IST
Last Updated 11 ಸೆಪ್ಟೆಂಬರ್ 2021, 21:47 IST
   

ನವದೆಹಲಿ: ಟೆಸ್ಲಾ ಕಂಪನಿಯ ವಿದ್ಯುತ್ ಚಾಲಿತ ವಾಹನಗಳಿಗೆ ತೆರಿಗೆ ರಿಯಾಯಿತಿಗಳನ್ನು ಪರಿಗಣಿಸುವ ಮೊದಲು ಭಾರತದಲ್ಲಿಯೇ ತಯಾರಿಕೆಯನ್ನು ಆರಂಭಿಸುವಂತೆ ಬೃಹತ್‌ ಕೈಗಾರಿಕೆಗಳ ಸಚಿವಾಲಯವು ಆ ಕಂಪನಿಗೆ ಸೂಚಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಭಾರತದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮೇಲಿನ ಆಮದು ಸುಂಕವನ್ನು ಕಡಿತ ಮಾಡುವಂತೆ ಟೆಸ್ಲಾ ಕಂಪನಿಯು ಬೇಡಿಕೆ ಇಟ್ಟಿದೆ.

ಕೇಂದ್ರ ಸರ್ಕಾರವು ಯಾವುದೇ ವಾಹನ ತಯಾರಿಕಾ ಕಂಪನಿಗೆ ತೆರಿಗೆ ರಿಯಾಯಿತಿಗಳನ್ನು ನೀಡುತ್ತಿಲ್ಲ. ಟೆಸ್ಲಾ ಕಂ‍ಪನಿಗೆ ರಿಯಾಯಿತಿ ನೀಡಿದಲ್ಲಿ ದೇಶದಲ್ಲಿ ಕೋಟಿಗಟ್ಟಲೆ ಹೂಡಿಕೆ ಮಾಡಿರುವ ಬೇರೆ ಕಂಪನಿಗಳಿಗೆ ಉತ್ತಮ ಸಂದೇಶ ನೀಡಿದಂತಾಗುವುದಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ಪ್ರಸ್ತುತ, ಭಾರತವು ₹ 29.60 ಲಕ್ಷಕ್ಕೂ ಅಧಿಕ ಮೌಲ್ಯ (ಸಿಐಎಫ್-ವೆಚ್ಚ, ವಿಮೆ ಮತ್ತು ಸಾಗಣೆ ವೆಚ್ಚ) ಹೊಂದಿರುವ ಸಂಪೂರ್ಣ ಆಮದು ಮಾಡಿದ ಕಾರುಗಳ ಮೇಲೆ ಶೇ 60ರಿಂದ ಶೇ 100 ರವರೆಗೆ ಆಮದು ಸುಂಕವನ್ನು ವಿಧಿಸುತ್ತಿದೆ.

ಸದ್ಯ ಭಾರತದಲ್ಲಿ ಇರುವ ಆಮದು ಸುಂಕವು ವಿಶ್ವದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳಿಗೆ ತಾತ್ಕಾಲಿಕ ಸುಂಕ ಪರಿಹಾರವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಟೆಸ್ಲಾ ಕಂಪನಿಯ ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಲಾನ್ ಮಸ್ಕ್ ಅವರು ಈಚೆಗಷ್ಟೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.