ನವದೆಹಲಿ: ನಷ್ಟದಲ್ಲಿರುವ ಏರ್ ಇಂಡಿಯಾ (ಎಐ) ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಸಂಬಂಧ ಕರೆದಿರುವ ಬಿಡ್‌ನ ನಿಯಮದಲ್ಲಿ ಸಡಿಲಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಕೋವಿಡ್–19 ಸಾಂಕ್ರಾಮಿಕವು ವಿಮಾನಯಾನ ವಲಯದಲ್ಲಿ ಅನಿಶ್ಚಿತ ವಾತಾವರಣವನ್ನು ಸೃಷ್ಟಿಸಿದೆ. ಹೀಗಾಗಿ ಖರೀದಿ ಆಸಕ್ತಿ ಸಲ್ಲಿಸುವ ಹಂತದಲ್ಲಿ ಸಾಲವನ್ನು ನಿಗದಿಪಡಿಸದೇ ಇರುವಂತೆ ಹೂಡಿಕೆದಾರರು ಕೇಳಿದ್ದಾರೆ.
‘ಸಾಲಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರು ಹೊಂದಿರುವ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು. ಕನಿಷ್ಠ ಪಕ್ಷ, ಖರೀದಿಗೆ ಆಸಕ್ತಿ ಸಲ್ಲಿಸುವ ಹಂತದಲ್ಲಿಯಾದರೂ ಹೂಡಿಕೆದಾರರಿಗೆ ಅನುಕೂಲ ಆಗುವಂತೆ ನೋಡಿಕೊಳ್ಳುವ ಆಲೋಚನೆ ಇದೆ’ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಪಾಂಡೆ ತಿಳಿಸಿದ್ದಾರೆ.
‘ಷೇರು ಮೌಲ್ಯದ ಆಧಾರದ ಮೇಲೆ ಅಥವಾ ಉದ್ಯಮದ ಮೌಲ್ಯದ ಆಧಾರದ ಮೇಲೆ ಬಿಡ್ಡಿಂಗ್ ನಡೆಸಬೇಕೆ ಎನ್ನುವುದನ್ನು ಏರ್ ಇಂಡಿಯಾ ಸ್ಪೆಸಿಫಿಕ್ ಅಲ್ಟರ್ನೇಟಿವ್ ಮೆಕಾನಿಸಮ್ (ಎಐಎಸ್‌ಎಎಂ) ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದೆ. ಬಿಡ್ ಆಹ್ವಾನದ ಪ್ರಾಥಮಿಕ ದಾಖಲೆ ಪತ್ರಗಳಲ್ಲಿ ಯಾವುದೇ ಬದಲಾವಣೆಗಳು ಇದ್ದಲ್ಲಿ ಹೂಡಿಕೆದಾರರಿಗೆ ಪ್ರಶ್ನೆ ಕೇಳಲು ಹೆಚ್ಚಿನ ಕಾಲಾವಕಾಶ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.
ಖರೀದಿಗೆ ಬಿಡ್ ಸಲ್ಲಿಸಲು ಈ ತಿಂಗಳ 30 ಕೊನೆಯದಿನವಾಗಿದೆ. ಮೂಲಗಳ ಪ್ರಕಾರ, ಬಿಡ್ ಸಲ್ಲಿಕೆ ಅವಧಿಯನ್ನು ಡಿಸೆಂಬರ್ ಮಧ್ಯಭಾಗದವರೆಗೂ ವಿಸ್ತರಿಸುವ ಸಾಧ್ಯತೆ ಇದೆ.
ಜನವರಿಯಲ್ಲಿ ನೀಡಿರುವ ಬಿಡ್ ಆಹ್ವಾನದ ಪ್ರಾಥಮಿಕ ದಾಖಲೆ ಪತ್ರಗಳ ಪ್ರಕಾರ, ಬಿಡ್ಡಿಂಗ್‌ನಲ್ಲಿ ಯಶಸ್ವಿಯಾಗುವವರಿಗೆ ಸಂಸ್ಥೆಯ ಒಟ್ಟು ₹ 60,074 ಕೋಟಿ ಸಾಲದಲ್ಲಿ ₹ 23,286 ಕೋಟಿ ಮೊತ್ತದ ಸಾಲ ವರ್ಗಾವಣೆ ಆಗಲಿದೆ. ಉಳಿದ ಸಾಲದ ಮೊತ್ತವನ್ನು ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್‌ಗೆ (ಎಐಎಎಚ್‌ಎಲ್) ವರ್ಗಾವಣೆ ಆಗಲಿದೆ.
ಏರ್ ಇಂಡಿಯಾವನ್ನು ಸಂಪೂರ್ಣವಾಗಿ ಮಾರಾಟ ಮಾಡುವುದರ ಜತೆಗೆ, ‘ಎಐ’ನ ಅಂಗಸಂಸ್ಥೆಯಾಗಿರುವ ಅಗ್ಗದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿನ (ಎಐಇ) ಶೇ 100ರಷ್ಟು ಮತ್ತು ಸಿಂಗಪುರ ಏರ್‌ಲೈನ್ಸ್ ಸಹಭಾಗಿತ್ವದಲ್ಲಿ ಇರುವ ‘ಎಐಎಸ್‌ಎಟಿಎಸ್’ನ ಶೇ 50ರಷ್ಟು ಪಾಲು ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.