ADVERTISEMENT

‘ಜಿಎಸ್‌ಟಿ ಕಡಿತ ವಸತಿ ಯೋಜನೆಗೆ ಕ್ರಾಂತಿಕಾರಿ ಹೆಜ್ಜೆ’

ಪಿಟಿಐ
Published 24 ಫೆಬ್ರುವರಿ 2019, 20:24 IST
Last Updated 24 ಫೆಬ್ರುವರಿ 2019, 20:24 IST
   

ನವದೆಹಲಿ: ವಸತಿ ಯೋಜನೆಗಳ ಮಾರಾಟದ ಮೇಲಿನ ಜಿಎಸ್‌ಟಿ ಕಡಿತವು ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿನ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಸಲಹೆಗಾರರು ಬಣ್ಣಿಸಿದ್ದಾರೆ.

ಈ ನಿರ್ಧಾರವು ಮನೆಗಳ ಖರೀದಿ ಉತ್ತೇಜಿಸಲಿದ್ದು, ಹಣದ ಕೊರತೆ ಎದುರಿಸುತ್ತಿರುವ ಕಟ್ಟಡ ನಿರ್ಮಾಣ ವಲಯಕ್ಕೆ ಚೇತರಿಕೆ ನೀಡಲಿದೆ. ದೇಶದಾದ್ಯಂತ ಮಾರಾಟವಾಗದ 6 ಲಕ್ಷ ಮನೆಗಳ ಖರೀದಿಗೆ ಗ್ರಾಹಕರು ಮುಂದೆ ಬರಬಹುದು ಎಂದು ರಿಯಲ್‌ ಎಸ್ಟೇಟ್‌ ವಲಯವು ನಿರೀಕ್ಷಿಸಿದೆ.

ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗಳಲ್ಲಿ ಜನರು ಮನೆಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ಜಿಎಸ್‌ಟಿ ಕಡಿತ ಮಾಡಬೇಕು ಎಂದು ಕಟ್ಟಡ ನಿರ್ಮಾಣಗಾರರುಒತ್ತಾಯಿಸುತ್ತಿದ್ದರು.

ADVERTISEMENT

‘ಕೈಗೆಟುಕುವ ಮನೆಗಳಿಗೆಶೇ 1ರಷ್ಟು ಜಿಎಸ್‌ಟಿ ಅನ್ವಯಿಸಿರುವುದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಮನೆ ಖರೀದಿಸುವವರ ಪಾಲಿಗೆ
ಈ ನಿರ್ಧಾರವು ಮಹತ್ವದ ಗೆಲುವಾಗಿದೆ’ ಎಂದು ಭಾರ­ತದ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಅಧ್ಯಕ್ಷ ಜಕ್ಸಯ್‌ ಶಾ ಬಣ್ಣಿಸಿದ್ದಾರೆ.

‘ಮನೆಗಳ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ನಿರ್ಣಾಯಕ ಕ್ರಮವಾಗಿದೆ’ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಿಶಿರ್‌ ಬೈಜಾಲ್‌ ಪ್ರತಿಕ್ರಿಯಿಸಿದ್ದಾರೆ.

‘ಮನೆ ಖರೀದಿಸುವವರ ಮತ್ತು ಕಟ್ಟಡ ನಿರ್ಮಾಣಗಾರರ ಪಾಲಿಗೆ ದೊರೆತಿರುವ ದೊಡ್ಡ ಪರಿಹಾರ ಇದಾಗಿದೆ’ ಎಂದು ಸಿಬಿಆರ್‌ಇನ ಸಿಇಒ ಅನ್ಶುಮಾನ್‌ ಎಂ. ಹೇಳಿದ್ದಾರೆ.

‘ಇದರಿಂದ ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಖರೀದಿಸಲು ಗ್ರಾಹಕರು ಮನಸ್ಸು ಮಾಡಲಿದ್ದಾರೆ. ಇಂತಹ ಯೋಜನೆಗಳ ಮಾರಾಟ ಏರಿಕೆಯಾಗಲಿದೆ. ಆದರೆ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ಗೆ ಅವಕಾಶ ಇಲ್ಲದೇ ಇರುವುದರಿಂದ ಕಟ್ಟಡ ನಿರ್ಮಾಣಗಾರರು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ವರ್ಗಾಯಿಸುವ ಸಾಧ್ಯತೆ ಇದೆ. ಉದ್ಯಮಕ್ಕೆ ನಷ್ಟವಾಗದಂತೆ ಹೊಸ ನಿಯಮಗಳನ್ನು ಎಚ್ಚರಿಕೆಯಿಂದ ರೂಪಿಸಬೇಕಾಗಿದೆ’ ಎಂದು ಅರವಿಂದ್ ಸ್ಮಾರ್ಟ್‌ ಸ್ಪೇಸಸ್‌ನ ಸಿಇಒ ಕಮಲ್‌ ಸಿಂಘಾಲ್‌ ಅವರು ಅಭಿಪ್ರಾಯ
ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.