ಜಿಎಸ್‌ಟಿ
ನವದೆಹಲಿ: ಹವಾನಿಯಂತ್ರಕಗಳ (ಎ.ಸಿ) ಮೇಲಿನ ಜಿಎಸ್‌ಟಿ ದರವನ್ನು ಈಗಿನ ಶೇ 28ರಿಂದ ಶೇ 18ಕ್ಕೆ ತಗ್ಗಿಸುವ ಪ್ರಸ್ತಾವನೆಯನ್ನು ಕೇಂದ್ರವು ಸಿದ್ಧಪಡಿಸಿರುವ ಹಿನ್ನೆಲೆಯಲ್ಲಿ, ಈ ಬಾರಿ ಹಬ್ಬಗಳ ಋತುವಿನಲ್ಲಿ ಇವುಗಳ ಮಾರಾಟವು ಹೆಚ್ಚಿನ ಮಟ್ಟದಲ್ಲಿ ಇರಲಿದೆ ಎಂಬ ನಿರೀಕ್ಷೆಯಲ್ಲಿ ತಯಾರಕರು ಇದ್ದಾರೆ.
ತೆರಿಗೆ ಹಂತದಲ್ಲಿನ ಬದಲಾವಣೆಯು ಜಾರಿಗೆ ಬಂದಲ್ಲಿ ಹವಾನಿಯಂತ್ರಕಗಳ ಬೆಲೆಯು ₹1,500ರಿಂದ ₹2,500ರವರೆಗೆ ಇಳಿಕೆ ಆಗಲಿದೆ.
32 ಇಂಚುಗಳಿಗಿಂತ ಹೆಚ್ಚಿನ ಗಾತ್ರದ ಟಿ.ವಿ.ಗಳ ಮೇಲಿನ ತೆರಿಗೆ ಕೂಡ ಈಗಿನ ಶೇ 28ರಿಂದ ಶೇ 18ಕ್ಕೆ ಇಳಿಕೆ ಆಗುವ ನಿರೀಕ್ಷೆ ಇದೆ.
ಸರ್ಕಾರವು ಪ್ರಸ್ತಾವಿತ ಬದಲಾವಣೆಗಳನ್ನು ಆದಷ್ಟು ಬೇಗ ಜಾರಿಗೆ ತರಬೇಕು. ಏಕೆಂದರೆ ಜನರು ಈಗ ತಮ್ಮ ಖರೀದಿ ತೀರ್ಮಾನಗಳನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎಂದು ಬ್ಲೂಸ್ಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ. ತ್ಯಾಗರಾಜನ್ ಹೇಳಿದ್ದಾರೆ.
ಹವಾನಿಯಂತ್ರಕಗಳು ಹಾಗೂ ಇತರ ಕೆಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ 18ಕ್ಕೆ ಇಳಿಕೆ ಮಾಡಿದಾಗ, ಮಾರುಕಟ್ಟೆ ಬೆಲೆಯಲ್ಲಿ ಶೇ 7ರವರೆಗೆ ಇಳಿಕೆ ಕಾಣಬಹುದು ಎಂದು ಪ್ಯಾನಾಸೋನಿಕ್ ಲೈಫ್ ಸಲ್ಯೂಷನ್ಸ್ ಇಂಡಿಯಾ ಕಂಪನಿಯ ಅಧ್ಯಕ್ಷ ಮನೀಶ್ ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.