ADVERTISEMENT

ವಿನಾಯ್ತಿ ಮಿತಿ ಏರಿಕೆ ಏಪ್ರಿಲ್‌ನಿಂದ

ಪಿಟಿಐ
Published 8 ಮಾರ್ಚ್ 2019, 17:39 IST
Last Updated 8 ಮಾರ್ಚ್ 2019, 17:39 IST
   

ನವದೆಹಲಿ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅನ್ವಯಿಸಿರುವ ಜಿಎಸ್‌ಟಿ ನೋಂದಣಿಯ ವಿನಾಯ್ತಿ ಮಿತಿಯನ್ನು ₹ 20 ಲಕ್ಷದಿಂದ ₹ 40 ಲಕ್ಷಕ್ಕೆ ಹೆಚ್ಚಿಸಿರುವುದನ್ನು ಏಪ್ರಿಲ್‌ 1 ರಿಂದ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳುವವರ ವಾರ್ಷಿಕ ವಹಿವಾಟಿನ ಗರಿಷ್ಠ ವಿನಾಯ್ತಿ ಮಿತಿಯನ್ನು ಹೆಚ್ಚಿಸಿರುವುದರಿಂದ ವರ್ಷಕ್ಕೆ ₹ 40 ಲಕ್ಷದವರೆಗೆ ವಹಿವಾಟು ನಡೆಸುವವರು ಹೊಸ ಹಣಕಾಸು ವರ್ಷದಿಂದ ಜಿಎಸ್‌ಟಿ ಪಾವತಿಸುವ ಅಗತ್ಯ ಇಲ್ಲ.

ಸಣ್ಣ ಪ್ರಮಾಣದಲ್ಲಿ ವಹಿವಾಟು ನಡೆಸುವವರಿಗೆ ಪರಿಹಾರ ನೀಡಲು ಜಿಎಸ್‌ಟಿ ಮಂಡಳಿಯು ಈ ನಿರ್ಧಾರ ಕೈಗೊಂಡಿತ್ತು.

ADVERTISEMENT

ರಾಜಿ ತೆರಿಗೆ ವ್ಯವಸ್ಥೆಗೆ (ಕಂಪೋಸಿಷನ್‌ ಸ್ಕೀಮ್‌) ಸೇರ್ಪಡೆಗೊಳ್ಳಲು ನಿಗದಿ ಮಾಡಿದ್ದ ವಹಿವಾಟಿನ ಗರಿಷ್ಠ ಮಿತಿಯನ್ನೂ ₹ 1.5 ಕೋಟಿಗೆ ಹೆಚ್ಚಿಸಲಾಗಿದೆ. ಈ ವ್ಯವಸ್ಥೆಯಡಿ, ಸಣ್ಣ ವರ್ತಕರು ಮತ್ತು ವಹಿವಾಟುದಾರರು ತಮ್ಮ ವಹಿವಾಟಿನ ಶೇ 1ರಷ್ಟು ತೆರಿಗೆ ಪಾವತಿಸಲು ಇದ್ದ ವಹಿವಾಟಿನ ಗರಿಷ್ಠ ಮಿತಿಯನ್ನು ಈಗ ₹ 1 ಕೋಟಿಯಿಂದ ₹ 1.5 ಕೋಟಿಗೆ ಹೆಚ್ಚಿಸಲಾಗಿದೆ.

ವರ್ಷಕ್ಕೆ ₹ 50 ಲಕ್ಷದವರೆಗೆ ವಹಿವಾಟು ನಡೆಸುವ ಸರಕು ಮತ್ತು ಸೇವೆಗಳ ಪೂರೈಕೆದಾರರು ಮತ್ತು ಸೇವೆ ಒದಗಿಸುವವರು ಕೂಡ ರಾಜಿ ತೆರಿಗೆ ಆಯ್ಕೆ ಮಾಡಿಕೊಂಡು ಹೊಸ ಹಣಕಾಸು ವರ್ಷದಿಂದ ಶೇ 6ರಷ್ಟು ತೆರಿಗೆ ಪಾವತಿಸಬಹುದಾಗಿದೆ.

ಜಿಎಸ್‌ಟಿ ಮಂಡಳಿಯು ಜನವರಿ 10ರಂದು ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಈ ಎಲ್ಲ ನಿರ್ಧಾರಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಸರಕುಗಳ ಪೂರೈಕೆದಾರರು ಜಿಎಸ್‌ಟಿ ನೋಂದಣಿ ಮತ್ತು ಪಾವತಿಗೆ ವಹಿವಾಟಿನ ಎರಡು ಗರಿಷ್ಠ ಮಿತಿಗಳನ್ನು ( ₹ 20 ಲಕ್ಷ ಮತ್ತು ₹ 40 ಲಕ್ಷ) ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರಗಳು ಇದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಸೇವೆ ಒದಗಿಸುವವರಿಗೆ ₹ 20 ಲಕ್ಷದ ಗರಿಷ್ಠ ಮಿತಿ ಮುಂದುವರೆಯಲಿದೆ. ವಿಶೇಷ ವಲಯದ ರಾಜ್ಯಗಳಲ್ಲಿ ಇದು ₹ 10 ಲಕ್ಷ ಇರಲಿದೆ. ‘ರಾಜಿ ತೆರಿಗೆ ವ್ಯವಸ್ಥೆಯಡಿ ವಹಿವಾಟಿನ ಗರಿಷ್ಠ ಮಿತಿ ಹೆಚ್ಚಿಸಿರುವುದರಿಂದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗಲಿದೆ’ ಎಂದು ಇವೈ ಇಂಡಿಯಾದ ತೆರಿಗೆ ಸಲಹೆಗಾರ ಅಭಿಷೇಕ್‌ ಜೈನ್‌ ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.