ADVERTISEMENT

ಎಚ್‌–1ಬಿ ವೀಸಾ | ಐ.ಟಿ ಕಂಪನಿಗಳ ಲಾಭದ ಮೇಲೆ ಅಲ್ಪ ಪರಿಣಾಮ: ಕ್ರಿಸಿಲ್‌

ಪಿಟಿಐ
Published 26 ಸೆಪ್ಟೆಂಬರ್ 2025, 14:29 IST
Last Updated 26 ಸೆಪ್ಟೆಂಬರ್ 2025, 14:29 IST
   

ಮುಂಬೈ: ಅಮೆರಿಕದ ಎಚ್‌–1ಬಿ ವೀಸಾ ಶುಲ್ಕ ಹೆಚ್ಚಳವು, ದೇಶದ ಐ.ಟಿ ಕಂಪನಿಗಳ ಲಾಭದ ಮೇಲೆ ಶೇ 0.20ರಷ್ಟು ಮಾತ್ರ ಪರಿಣಾಮ ಬೀರಲಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್‌ ಹೇಳಿದೆ.

2018ರಿಂದ ಐ.ಟಿ ಕಂಪನಿಗಳು ಎಚ್‌–1ಬಿ ವೀಸಾದ ಮೇಲಿನ ಅವಲಂಬನೆ ಕಡಿಮೆ ಮಾಡಿವೆ. ಆದರೆ, ಇದೀಗ ಹೊಸದಾಗಿ ಪಡೆಯುವ ಎಚ್‌–1ಬಿ ವೀಸಾ ಮೇಲಿನ ಶುಲ್ಕವನ್ನು ಅಮೆರಿಕ 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸಿದೆ. ಇದು ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ (ಐ.ಟಿ) ಲಾಭದ ಮೇಲೆ ಶೇ 0.10ರಿಂದ ಶೇ 0.20ರಷ್ಟು ಪರಿಣಾಮ ಬೀರಲಿದೆ. ಈ ಕಂಪನಿಗಳು ಕಳೆದ ಆರ್ಥಿಕ ವರ್ಷದಲ್ಲಿ ಶೇ 22ರಷ್ಟು ಲಾಭ ಗಳಿಸಿವೆ. 

ಅಮೆರಿಕದ ಅಧಿಕೃತ ದಾಖಲೆಗಳ ಪ್ರಕಾರ ಎಚ್‌–1ಬಿ ವೀಸಾ ಹೊಂದಿದ ಟಿಸಿಎಸ್‌, ಇನ್ಫೊಸಿಸ್‌, ವಿಪ್ರೊ ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್‌ನಲ್ಲಿ ಕೆಲಸ ಮಾಡುವ ಭಾರತೀಯ ಉದ್ಯೋಗಿಗಳ ಸಂಖ್ಯೆ 2017ರಲ್ಲಿ 34,507 ಇತ್ತು. ಇದು 2025ರ ವೇಳೆಗೆ 17,997ಕ್ಕೆ ಇಳಿದಿದೆ. ವೀಸಾ ನಿರಾಕರಣೆ ಪ್ರಮಾಣದ ಹೆಚ್ಚಳವು, ಇದರ ಇಳಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.