ADVERTISEMENT

ಎಫ್‌ಡಿಐ ಒಳಹರಿವು ಏರಿಕೆ: ಮಾಸಿಕ ಸರಾಸರಿ ₹38,500 ಕೋಟಿ ಹೂಡಿಕೆ

ಪಿಟಿಐ
Published 25 ಡಿಸೆಂಬರ್ 2024, 12:55 IST
Last Updated 25 ಡಿಸೆಂಬರ್ 2024, 12:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜಾಗತಿಕ ಬಿಕ್ಕಟ್ಟು ಹಾಗೂ ಸವಾಲುಗಳ ನಡುವೆಯೂ ಪ್ರಸಕ್ತ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಭಾರತಕ್ಕೆ ಮಾಸಿಕ ಸರಾಸರಿ ₹38,500 ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದು ಬಂದಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಹೂಡಿಕೆ ಸ್ನೇಹಿ ವಾತಾವರಣ ಕಲ್ಪಿಸುವುದಾಗಿ ಹೇಳಿದೆ. ಹಾಗಾಗಿ, ಮುಂದಿನ ವರ್ಷವೂ ವಿದೇಶಿ ನೇರ ಬಂಡವಾಳದ ಒಳಹರಿವಿನ ಏರಿಕೆಯು ಇದೇ ಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. 

ಸರ್ಕಾರವು ಹೂಡಿಕೆದಾರ ಸ್ನೇಹಿ ನೀತಿ ರೂಪಿಸಿದೆ. ಹೂಡಿಕೆ ಮೇಲಿನ ಗಳಿಕೆಯೂ ಉತ್ತಮವಾಗಿದೆ. ದೇಶವು ಕೌಶಲಭರಿತ ಮಾನವ ಸಂಪನ್ಮೂಲವನ್ನು ಹೊಂದಿದೆ. ಕೈಗಾರಿಕೆಗಳಿಗೆ ಅನುಮತಿ ನೀಡಲು ಏಕಗವಾಕ್ಷಿ ಯೋಜನೆ ರೂಪಿಸಲಾಗಿದೆ. ಉತ್ಪಾದನೆ ಆಧರಿತ ಪ್ರೋತ್ಸಾಹ ನೀಡಲಾಗುತ್ತಿದೆ. ಇದು ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳಕ್ಕೆ ನೆರವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಜನವರಿಯಿಂದ ಸೆಪ್ಟೆಂಬರ್‌ವರೆಗೆ ₹3.60 ಲಕ್ಷ ಕೋಟಿ ಎಫ್‌ಡಿಐ ಒಳಹರಿವು ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹2.53 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿತ್ತು. ಒಟ್ಟಾರೆ ಶೇ 42ರಷ್ಟು ಏರಿಕೆಯಾಗಿದೆ.

ಕಳೆದ ಒಂದು ದಶಕದಲ್ಲಿ ₹84.62 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ.

‘ದೇಶದಲ್ಲಿ ಹೂಡಿಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೂಪಿಸಿದ್ದ ಕಠಿಣ ನಿಯಮಗಳನ್ನು ಸರ್ಕಾರವು ತೆಗೆದು ಹಾಕಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದೆ. ವ್ಯವಹಾರ ಸ್ನೇಹಿ ವಾತಾವರಣ ಸೃಷ್ಟಿಸಿದೆ. ದೇಶದ ಆರ್ಥಿಕ ಸ್ಥಿತಿಯು ಜಾಗತಿಕ ಹೂಡಿಕೆದಾರರಿಗೆ ಪೂರಕ ವಾತಾವರಣ ಸೃಷ್ಟಿಸಿದೆ’ ಎಂದು ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಕಾರ್ಯದರ್ಶಿ ಅಮರದೀಪ್ ಸಿಂಗ್ ಭಾಟಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.