ನವದೆಹಲಿ: ನಿಗದಿತ ದಿನಾಂಕಕ್ಕೆ ಮೊದಲು ಆದಾಯ ತೆರಿಗೆ (ಐ.ಟಿ) ವಿವರ ಸಲ್ಲಿಸಲು ಸಾಧ್ಯವಾಗದೆ ಇದ್ದರೂ, ಆದಾಯ ತೆರಿಗೆಯ ರೂಪದಲ್ಲಿ ಕಡಿತವಾದ ಮೊತ್ತವನ್ನು ದಂಡ ಪಾವತಿಸದೆಯೂ ಮರಳಿ ಪಡೆಯಲು ಅವಕಾಶ ಕಲ್ಪಿಸುವ ಮಸೂದೆಗೆ ಲೋಕಸಭೆಯು ಸೋಮವಾರ ಅಂಗೀಕಾರ ನೀಡಿದೆ.
ಆದಾಯ ತೆರಿಗೆ (ಸಂಖ್ಯೆ 2) ಮಸೂದೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಯು 2026ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಕಾಯ್ದೆ – 1961ರ ಬದಲು ಜಾರಿಗೆ ಬರಲಿದೆ. ಹೊಸ ಮಸೂದೆಯನ್ನು ಲೋಕಸಭೆಯು ಗದ್ದಲದ ನಡುವೆ ಚರ್ಚೆ ಇಲ್ಲದೆ ಅಂಗೀಕರಿಸಿತು.
ವ್ಯಕ್ತಿಗಳ ಹಾಗೂ ಕಂಪನಿಗಳ ಆದಾಯಕ್ಕೆ ವಿಧಿಸುವ ತೆರಿಗೆಗೆ ಸಂಬಂಧಿಸಿದ, 63 ವರ್ಷಗಳಷ್ಟು ಹಳೆಯದಾದ ಕಾಯ್ದೆಯ ಬದಲಿಗೆ ಜಾರಿಗೆ ತರಲು ಉದ್ದೇಶಿಸಲಾಗಿರುವ ಮಸೂದೆಗೆ ಲೋಕಸಭೆಯು ಮೂರು ನಿಮಿಷಗಳಲ್ಲಿ ಅಂಗೀಕಾರ ನೀಡಿದೆ.
ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ, ಈ ಮಸೂದೆಯು ಪದಗಳನ್ನು ಹಾಗೂ ಸಂಕೀರ್ಣತೆಯನ್ನು ಕಡಿಮೆ ಮಾಡಿದೆ ಎನ್ನಲಾಗಿದೆ. ಮಸೂದೆಯಲ್ಲಿ ಇರುವ ವಿವರಗಳು ಸುಲಭವಾಗಿ ಅರ್ಥವಾಗುವ ಬಗೆಯಲ್ಲಿ ಇವೆ. ‘ತೆರಿಗೆ ನಿರ್ಧರಿಸುವ ವರ್ಷ’, ‘ಹಿಂದಿನ ವರ್ಷ’ ಎಂಬ ಗೊಂದಲ ಮೂಡಿಸುವ ಪದಗಳ ಬಳಕೆಯನ್ನು ಕೈಬಿಟ್ಟಿರುವ ಈ ಮಸೂದೆಯು ‘ತೆರಿಗೆ ವರ್ಷ’ ಎಂಬ ಪದಗಳನ್ನು ಬಳಸಿದೆ.
ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಸಿಗಬೇಕಿದೆ. ಅದು ದೊರೆತ ನಂತರ ರಾಷ್ಟ್ರಪತಿಯವರ ಅಂಕಿತ ಬೇಕಾಗುತ್ತದೆ. ನಂತರದಲ್ಲಿ ಈ ಮಸೂದೆಯು ಕಾಯ್ದೆಯಾಗಿ ಜರಿಗೆ ಬರುತ್ತದೆ.
ಫೆಬ್ರುವರಿಯಲ್ಲಿ ಮಂಡಿಸಲಾಗಿದ್ದ ‘ಆದಾಯ ತೆರಿಗೆ ಮಸೂದೆ – 2025’ಅನ್ನು ನಿರ್ಮಲಾ ಅವರು ಶುಕ್ರವಾರ ಹಿಂದಕ್ಕೆ ಪಡೆದಿದ್ದರು. ಪರಿಷ್ಕೃತ ಮಸೂದೆಯನ್ನು ಸೋಮವಾರ ಮಂಡಿಸಿದರು. ಪರಿಷ್ಕೃತ ಮಸೂದೆಯು ಸಂಸತ್ತಿನ ಪರಿಶೀಲನಾ ಸಮಿತಿಯು ನೀಡಿದ್ದ ಬಹುತೇಕ ಎಲ್ಲ ಶಿಫಾರಸುಗಳನ್ನು ಒಳಗೊಂಡಿದೆ. ಈ ಸಮಿತಿಯು ಮೂಲ ಮಸೂದೆಯನ್ನು ಪರಿಶೀಲಿಸಿ, ಶಿಫಾರಸುಗಳನ್ನು ನೀಡಿತ್ತು.
ನಿಗದಿತ ದಿನಾಂಕಕ್ಕೆ ಮೊದಲು ಐ.ಟಿ. ವಿವರ ಸಲ್ಲಿಸದೆ ಇರುವವರ ‘ಮೂಲದಲ್ಲೇ ತೆರಿಗೆ ಕಡಿತ’ದ ಕ್ಲೇಮ್‌ಗೆ ಸಂಬಂಧಿಸಿದ ಕಾನೂನಿನ ಅಂಶಗಳನ್ನು ಬದಲಾಯಿಸಬೇಕು ಎಂದು ಪರಿಶೀಲನಾ ಸಮಿತಿಯು ಹೇಳಿತ್ತು.
ಪರಿಷ್ಕೃತ ಮಸೂದೆಯ ಪ್ರಕಾರ, ಗಡುವಿನ ನಂತರ ಐ.ಟಿ. ವಿವರ ಸಲ್ಲಿಸುವವರು ಕೂಡ ತಮ್ಮ ಟಿಡಿಎಸ್‌ಗೆ ದಂಡಶುಲ್ಕ ಇಲ್ಲದೆ ಮರುಪಾವತಿ ಕ್ಲೇಮ್ ಸಲ್ಲಿಸಲು ಅವಕಾಶ ಇರುತ್ತದೆ.
ಹಣಕಾಸು ಸಚಿವಾಲಯವು ಈಗ ಜಾರಿಯಲ್ಲಿ ಇರುವ ಆದಾಯ ತೆರಿಗೆ ಕಾಯ್ದೆಯ ಅಂಶಗಳನ್ನು ಹೊಸ ಮಸೂದೆಯಲ್ಲಿ ಸೇರಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.