ADVERTISEMENT

ವೊಡಾಫೋನ್‌ನ ಪೂರ್ವಾನ್ವಯ ತೆರಿಗೆ: ಆದೇಶ ಪ್ರಶ್ನಿಸಿದ ಕೇಂದ್ರ

ಪಿಟಿಐ
Published 24 ಡಿಸೆಂಬರ್ 2020, 14:47 IST
Last Updated 24 ಡಿಸೆಂಬರ್ 2020, 14:47 IST
ಸಾಂದರ್ಭಿಕ ಚಿತ್ರ – (ಕೃಪೆ: ಎಎಫ್‌ಪಿ)
ಸಾಂದರ್ಭಿಕ ಚಿತ್ರ – (ಕೃಪೆ: ಎಎಫ್‌ಪಿ)   

ನವದೆಹಲಿ: ‘ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿ ವೊಡಾಫೋನ್‌ ಸಮೂಹದ ಪರವಾಗಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಭಾರತ ಸರ್ಕಾರವು ಸಿಂಗಪುರ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ’ ಎಂದು ಮೂಲಗಳು ಹೇಳಿವೆ.

ವೊಡಾಫೋನ್‌ ಕಂಪನಿಯು ₹ 22,100 ಕೋಟಿ ತೆರಿಗೆ ಮೊತ್ತ ಪಾವತಿಸಬೇಕು ಎಂದು ಭಾರತ ಸರ್ಕಾರ ಬೇಡಿಕೆ ಇಟ್ಟಿದೆ. ಅದನ್ನು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯು ಸೆಪ್ಟೆಂಬರ್‌ 25ರಂದು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಲು ಭಾರತಕ್ಕೆ 90 ದಿನಗಳ ಕಾಲಾವಕಾಶ ಇತ್ತು. ಅದರಂತೆಯೇ ಸಿಂಗಪುರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು ಈ ಬೆಳವಣಿಗೆಯನ್ನು ಗಮನಿಸುತ್ತಿರುವ ಮೂಲಗಳು ತಿಳಿಸಿವೆ.

ಕಂಪನಿಗೆ ಕಾನೂನು ವೆಚ್ಚವಾಗಿ ಕೇಂದ್ರವು ₹ 40.31 ಕೋಟಿಯಷ್ಟು ಹಣವನ್ನು ಪಾವತಿ ಮಾಡಬೇಕು ಎನ್ನುವುದನ್ನೂ ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದೆ.

ADVERTISEMENT

ವಿವಿಧ ದೇಶಗಳ ಜೊತೆಗಿನ ರಕ್ಷಣಾತ್ಮಕ ಹೂಡಿಕೆ ಒಪ್ಪಂದಗಳಲ್ಲಿ ತೆರಿಗೆ ಅಂಶವು ಒಳಗೊಂಡಿರುವುದಿಲ್ಲ. ತೆರಿಗೆ ಕಾನೂನು ದೇಶದ ಸಾರ್ವಭೌಮ ಹಕ್ಕು ಎನ್ನುವುದನ್ನು ಸರ್ಕಾರ ನಂಬಿದೆ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ವೊಡಾಫೋನ್‌ ಸಮೂಹವು ನಿರಾಕರಿಸಿದೆ.

ಕಾಯರ್‌ ಎನರ್ಜಿಗೆ ₹ 10 ಸಾವಿರ ಕೋಟಿ ಹಿಂದಿರುಗಿಸುವಂತೆ ದಿ ಹೇಗ್‌ನ ಮಧ್ಯಸ್ಥಿಕೆ ನ್ಯಾಯಮಂಡಳಿ ಆದೇಶ ನೀಡಿತ್ತು. ಆ ಕುರಿತಾಗಿಯೂ ಪ್ರಶ್ನಿಸಲು ಭಾರತಕ್ಕೆ ಇದೀಗ ಅವಕಾಶ ದೊರಕಿದಂತಾಗಿದೆ.

ಏನಿದು ಪ್ರಕರಣ: ಹಚಿಸನ್ ವ್ಯಾಂಪೊ ಕಂಪನಿ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಂದಿದ್ದ ಆಸ್ತಿಗಳನ್ನು ವೊಡಾಫೋನ್‌ 2007ರಲ್ಲಿ ಖರೀದಿಸಿತ್ತು. ನಂತರ ಈ ತೆರಿಗೆ ವಿವಾದ ಸೃಷ್ಟಿಯಾಗಿತ್ತು. ಆಸ್ತಿ ಖರೀದಿಗೆ ತೆರಿಗೆ ಪಾವತಿಸಬೇಕು ಎಂದು ಸರ್ಕಾರ ಹೇಳಿದ್ದನ್ನು ವೊಡಾಫೋನ್ ಪ್ರಶ್ನಿಸಿತ್ತು. ವೊಡಾಫೋನ್‌ ಪರವಾಗಿ 2012ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುನೀಡಿತ್ತು. ಹೀಗಿದ್ದರೂ, ಅದೇ ವರ್ಷ ನಿಯಮಗಳಲ್ಲಿ ಬದಲಾವಣೆ ತಂದ ಸರ್ಕಾರವು, ಅದಾಗಲೇ ಪೂರ್ಣಗೊಂಡಿರುವ ಆಸ್ತಿ ಖರೀದಿಗೂ ತೆರಿಗೆ ಪಾವತಿ ಅನ್ವಯ ಆಗುವಂತೆ ಮಾಡಿತ್ತು. 2014ರ ಏಪ್ರಿಲ್‌ನಲ್ಲಿವೊಡಾಫೋನ್‌ ಕಂಪನಿ ಮಧ್ಯಸ್ಥಿಕೆಯ ಮೊರೆ ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.