ADVERTISEMENT

ಹಣದುಬ್ಬರ ನಿಯಂತ್ರಣದಲ್ಲಿ ಎಚ್ಚರ ತಪ್ಪುವುದಿಲ್ಲ: ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 29 ಮೇ 2023, 15:51 IST
Last Updated 29 ಮೇ 2023, 15:51 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್    

ಮುಂಬೈ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಹಣದುಬ್ಬರ ನಿಯಂತ್ರಣ ವಿಚಾರದಲ್ಲಿ ಎಚ್ಚರ ತಪ್ಪುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಹಣದುಬ್ಬರಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಹಣದುಬ್ಬರವು ಇಳಿಮುಖವಾಗಿದೆ ಎಂದು ಹೇಳಿದ್ದಾರೆ.

ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 4.7ರಷ್ಟು ಆಗಿದ್ದು, 18 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಗ್ರಾಹಕ ದರ ಸೂಚ್ಯಂಕದಲ್ಲಿ ಸುಮಾರು ಅರ್ಧದಷ್ಟು ಪಾಲು ಹೊಂದಿರುವ ಆಹಾರ ವಸ್ತುಗಳ ದರ ಇಳಿಕೆ ಆಗಿರುವುದರಿಂದ ಏಪ್ರಿಲ್‌ನಲ್ಲಿ ಹಣದುಬ್ಬರ ಇಳಿಕೆ ಆಗುವಂತಾಗಿದೆ.

ADVERTISEMENT

ಹಣದುಬ್ಬರವು ಶೇ 4ರ ಮಟ್ಟಕ್ಕೆ ಬರಲಿದೆ ಎನ್ನುವುದು ಆರ್ಥಿಕ ತಜ್ಞರ ನಿರೀಕ್ಷೆ ಆಗಿದೆ. ಹಣದುಬ್ಬರವನ್ನು ಗರಿಷ್ಠ ಶೇ 6ರ ಒಳಗೆ ನಿಯಂತ್ರಿಸುವಂತೆ ಸರ್ಕಾರವು ಆರ್‌ಬಿಐಗೆ ಸೂಚನೆ ನೀಡಿದೆ. ಆದರೆ, 2022ರಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು ಬಹುತೇಕ ಶೇ 6ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.