ADVERTISEMENT

ಅಮೆರಿಕಕ್ಕೆ 40 ಸಾವಿರ ಟನ್ ಸೀಗಡಿ ರಫ್ತಿಗೆ ಸಿದ್ಧತೆ

ಪಿಟಿಐ
Published 14 ಏಪ್ರಿಲ್ 2025, 13:22 IST
Last Updated 14 ಏಪ್ರಿಲ್ 2025, 13:22 IST
ಸೀಗಡಿ
ಸೀಗಡಿ   

ನವದೆಹಲಿ: ಅಮೆರಿಕಕ್ಕೆ 35 ಸಾವಿರ ಟನ್‌ನಿಂದ 40 ಸಾವಿರ ಟನ್‌ನಷ್ಟು ಸೀಗಡಿ ರಫ್ತು ಮಾಡಲು ದೇಶದ ಸಮುದ್ರ ಆಹಾರ ರಫ್ತುಗಾರರು ಸಿದ್ಧತೆ ನಡೆಸಿದ್ದಾರೆ ಎಂದು ಸಮುದ್ರ ಆಹಾರ ರಫ್ತುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ರಾಘವನ್‌ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರವು ಪ್ರತಿ ಸುಂಕ ನೀತಿಗೆ ತಾತ್ಕಾಲಿಕವಾಗಿ ವಿರಾಮ ನೀಡಿದೆ. ಅಮೆರಿಕದಿಂದ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇರುವ ಕಾರಣ ರಫ್ತು ಮಾಡುತ್ತಿದ್ದೇವೆ ಎಂದು ಸೋಮವಾರ ತಿಳಿಸಿದ್ದಾರೆ.

ಸೀಗಡಿ ಹೊಂದಿರುವ 2 ಸಾವಿರ ಕಂಟೇನರ್‌ಗಳು ರಫ್ತಿಗೆ ಸಿದ್ಧವಾಗಿದೆ. ಪ್ರಸ್ತುತ ಭಾರತದ ಸೀಗಡಿಗಳಿಗೆ ಅಮೆರಿಕ ಶೇ 17.7ರಷ್ಟು ಕಸ್ಟಮ್ಸ್ ಸುಂಕ ವಿಧಿಸುತ್ತದೆ.  

ADVERTISEMENT

90 ದಿನಗಳ ಸುಂಕ ವಿರಾಮವು ರಫ್ತುದಾರರಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಈ ರಫ್ತು ಪೂರೈಸಲು ಅವಕಾಶವನ್ನು ಒದಗಿಸುತ್ತದೆ. ಗಾತ್ರ ಮತ್ತು ಮೌಲ್ಯದಲ್ಲಿ ಅಮೆರಿಕವು, ಭಾರತದ ಅತಿದೊಡ್ಡ ಸೀಗಡಿ ಮಾರುಕಟ್ಟೆಯಾಗಿದೆ. 2023–24ರ ಆರ್ಥಿಕ ವರ್ಷದಲ್ಲಿ ₹23,246 ಕೋಟಿ ಮೌಲ್ಯದ ಸೀಗಡಿಯನ್ನು ಅಮೆರಿಕಕ್ಕೆ ರಫ್ತು ಮಾಡಲಾಗಿತ್ತು ಎಂದು ತಿಳಿಸಿದೆ.

‘ಸುಂಕ ವಿರಾಮ ಮುಕ್ತಾಯಗೊಳ್ಳುವ ಮೊದಲು ಮುಂಬರುವ ವ್ಯಾಪಾರ ಮಾತುಕತೆ ವೇಳೆ ದೇಶದ ಸಮುದ್ರ ಆಹಾರ ರಫ್ತಿಗೆ ಅನುಕೂಲ ಕಲ್ಪಿಸುವತ್ತ ಗಮನಹರಿಸಬೇಕು’ ಎಂದು ರಾಘವನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.