ADVERTISEMENT

ಎಲ್‌ಐಸಿ ಐಪಿಒ ಗುರಿ ಅರ್ಧದಷ್ಟು ಇಳಿಕೆ

ರಾಯಿಟರ್ಸ್
Published 22 ಏಪ್ರಿಲ್ 2022, 10:50 IST
Last Updated 22 ಏಪ್ರಿಲ್ 2022, 10:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಎಲ್‌ಐಸಿ ಐಪಿಒ ಮೂಲಕ ಸಂಗ್ರಹಿಸಲು ಉದ್ದೇಶಿಸಿರುವ ಮೊತ್ತವನ್ನು ₹ 29,640 ಕೋಟಿಗೆ ತಗ್ಗಿಸಿದೆ. ಇದು ಮೊದಲು ಉದ್ದೇಶಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಸರಿಸುಮಾರು ಅರ್ಧದಷ್ಟು ಕಡಿಮೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕಂಪ‍ನಿಯಲ್ಲಿನ ಶೇಕಡ 5ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 60 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿತ್ತು.

ಹೂಡಿಕೆದಾರರಿಂದ ಪ್ರತಿಕ್ರಿಯೆ ಪಡೆದ ಬಳಿಕ ಕಂಪನಿಯ ಒಟ್ಟಾರೆ ಮೌಲ್ಯದ ಅಂದಾಜನ್ನು ಸಹ ತಗ್ಗಿಸಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಐಪಿಒ ವಿಚಾರವಾಗಿ ರೋಡ್‌ಷೋ ನಡೆಸಿದ ಬಳಿಕ ಗರಿಷ್ಠ ಮೌಲ್ಯ ನಿಗದಿಪಡಿಸುವುದರಲ್ಲಿ ಯಾವುದೇ ಅರ್ಥ ಇಲ್ಲ ಎನ್ನುವುದು ಮನವರಿಕೆ ಆಗಿದೆ. ಕಂಪನಿಯು ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆದ ಬಳಿಕ ಗರಿಷ್ಠ ಮೌಲ್ಯ ತಲುಪಲು ಯತ್ನಿಸಬಹುದು. ಏನೇ ಆದರೂ ಐಪಿಒ ಬಳಿಕವೂ ಶೇ 95ರಷ್ಟು ಷೇರುಪಾಲುಸರ್ಕಾರದ ಬಳಿಯೇ ಇರಲಿದೆ ಎಂದು ಮೂಲಗಳು ಹೇಳಿವೆ.

ಐಪಿಒ ಮೊತ್ತವನ್ನು ಅರ್ಧದಷ್ಟು ಕಡಿಮೆ ಮಾಡಿದರೂ ಈವರೆಗಿನ ಅತಿದೊಡ್ಡ ಮೊತ್ತ ಇದಾಗಲಿದೆ. ಕೇಂದ್ರ ಸರ್ಕಾರವು ಈ ಹಿಂದೆ ಕಂಪನಿಯ ಮೌಲ್ಯ ₹ 17 ಲಕ್ಷ ಕೋಟಿ ಆಗಬಹುದು ಎಂದು ಅಂದಾಜು ಮಾಡಿತ್ತು. ಆದರೆ ಈಗ ಕಂಪನಿಯ ಮೌಲ್ಯವನ್ನು ₹ 6 ಲಕ್ಷ ಕೋಟಿಗೆ ನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.