ADVERTISEMENT

ಸಕ್ಕರೆ ಉತ್ಪಾದನೆ ಶೇ 18ರಷ್ಟು ಹೆಚ್ಚು: ಐಎಸ್‌ಎಂಎ

ಸಕ್ಕರೆ ತಯಾರಿಕಾ ಕಂಪನಿಗಳ ಒಕ್ಕೂಟದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 19:06 IST
Last Updated 11 ನವೆಂಬರ್ 2025, 19:06 IST
   

ನವದೆಹಲಿ: ಅಕ್ಟೋಬರ್‌ಗೆ ಶುರುವಾದ 2025–26ನೇ ಸಾಲಿನ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ ದೇಶದ ಸಕ್ಕರೆ ಉತ್ಪಾದನೆ ಪ್ರಮಾಣವು ಶೇ 18.58ರಷ್ಟು ಹೆಚ್ಚಳವಾಗಿ, 3.09 ಕೋಟಿ ಟನ್‌ಗೆ ತಲುಪುವ ನಿರೀಕ್ಷೆಇದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಒಕ್ಕೂಟ (ಐಎಸ್‌ಎಂಎ) ಹೇಳಿದೆ.

ಕಳೆದ ಮಾರುಕಟ್ಟೆ ವರ್ಷದಲ್ಲಿ ದೇಶದಲ್ಲಿ 2.61 ಕೋಟಿ ಟನ್‌ ಸಕ್ಕರೆ ಉತ್ಪಾದನೆ ಆಗಿತ್ತು. ಈ ಮಾರುಕಟ್ಟೆ ವರ್ಷದ ಆರಂಭದಲ್ಲಿ ಸಕ್ಕರೆಯ ದಾಸ್ತಾನು 50 ಲಕ್ಷ ಟನ್‌ ಆಗಿದೆ. ಎಥೆನಾಲ್‌ಗಾಗಿ ಈ ವರ್ಷದಲ್ಲಿ 34 ಲಕ್ಷ ಟನ್ ಸಕ್ಕರೆಯನ್ನು ಬಳಸಿಕೊಳ್ಳುವ ಅಂದಾಜು ಇದೆ ಎಂದು ಐಎಸ್‌ಎಂಎ ಹೇಳಿದೆ.

ವರ್ಷದ ಆರಂಭದಲ್ಲಿ ಇದ್ದ ಸಕ್ಕರೆ ದಾಸ್ತಾನು ಹಾಗೂ ಹೆಚ್ಚಿನ ಪ್ರಮಾಣದ ಉತ್ಪಾದನೆಯನ್ನು ಪರಿಗಣಿಸಿದರೆ ಈ ಬಾರಿ ಸಕ್ಕರೆಯ ಲಭ್ಯತೆಯು 3.59 ಕೋಟಿ ಟನ್‌ ಆಗಲಿದೆ. ಇದು ದೇಶದ ಮಾರುಕಟ್ಟೆಗೆ ಅಗತ್ಯವಿರುವ ಸಕ್ಕರೆಯ ಪ್ರಮಾಣವಾದ 2.85 ಕೋಟಿ ಟನ್‌ಗಿಂತ ಹೆಚ್ಚು ಎಂದು ಐಎಸ್‌ಎಂಎ ಹೇಳಿದೆ.

ADVERTISEMENT

ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಉತ್ಪಾದನೆಯು ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ದೇಶದ ಒಟ್ಟಾರೆ ಸಕ್ಕರೆ ಉತ್ಪಾದನೆಯೂ ಜಾಸ್ತಿ ಆಗಬಹುದು ಎಂದು ಅದು ಅಂದಾಜು ಮಾಡಿದೆ. 2025–26ರಲ್ಲಿ ಕರ್ನಾಟಕದಲ್ಲಿ 63.5 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗುವ ನಿರೀಕ್ಷೆ ಇದೆ.

‘ದೇಶದಲ್ಲಿ ಸಕ್ಕರೆ ಲಭ್ಯತೆಯು ಈ ಬಾರಿ ಉತ್ತಮ ಮಟ್ಟದಲ್ಲಿ ಇರುವ ಅಂದಾಜು ಇದೆ. ಹೀಗಾಗಿ ಭಾರತದಿಂದ ಸರಿಸುಮಾರು 20 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು ಅವಕಾಶ ಇದೆ. ರಫ್ತು ನೀತಿಯನ್ನು ಆದಷ್ಟು ಬೇಗ ಪ್ರಕಟಿಸುವಂತೆ ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ’ ಎಂದು ಐಎಸ್‌ಎಂಎ ಹೇಳಿದೆ.

2024–25ನೇ ಬೆಳೆ ವರ್ಷದಲ್ಲಿ (ಜುಲೈನಿಂದ ಜೂನ್‌ವರೆಗಿನ ಅವಧಿ) ಕಬ್ಬು ಬೆಳೆಯುವ ಪ್ರದೇಶದ ವ್ಯಾಪ್ತಿಯು 57.35 ಲಕ್ಷ ಹೆಕ್ಟೇರ್‌ಗೆ ವಿಸ್ತರಿಸಿದೆ. ಕರ್ನಾಟಕದಲ್ಲಿ ಕಬ್ಬು ಬೆಳೆಯುವ ಪ್ರದೇಶವು ಶೇ 6ರಷ್ಟು ಹೆಚ್ಚಾಗಿ, 6.80 ಲಕ್ಷ ಹೆಕ್ಟೇರ್‌ಗೆ ತಲುಪಿದೆ.

ಈ ಬಾರಿಯ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ 15 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಈಚೆಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.