ADVERTISEMENT

ಐಪಿಒ ಮೌಲ್ಯಮಾಪನ: ಪರಿಶೀಲನೆ ಬಿಗಿಗೊಳಿಸಿದ ಸೆಬಿ

ರಾಯಿಟರ್ಸ್
Published 11 ಮಾರ್ಚ್ 2022, 13:31 IST
Last Updated 11 ಮಾರ್ಚ್ 2022, 13:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಸಿದ್ಧವಾಗುತ್ತಿರುವ ಕಂಪನಿಗಳ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಬಿಗಿಗೊಳಿಸಿದೆ. ಕಂಪನಿಗಳ ಮೌಲ್ಯಮಾಪನವನ್ನು ಹೇಗೆ ಮಾಡಲಾಯಿತು ಎಂಬ ವಿಚಾರವಾಗಿ ಕೆಲವು ಪ್ರಶ್ನೆಗಳನ್ನು ಸೆಬಿ ಕೇಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಐಪಿಒಗೆ ಸಿದ್ಧವಾಗಿರುವ ಕಂಪನಿಗಳು ಹೆಚ್ಚಿನ ಮಾಹಿತಿ ನೀಡಬೇಕು ಎಂಬ ಪ್ರಸ್ತಾವನೆಯನ್ನು ಸೆಬಿ ಹಿಂದಿನ ತಿಂಗಳು ಸಿದ್ಧಪಡಿಸಿತ್ತು. ಅಲ್ಲದೆ, ‘ಹೊಸ ಕಾಲದ ತಂತ್ರಜ್ಞಾನ ಕಂಪನಿಗಳು ಬಹುಕಾಲದವರೆಗೆ ನಷ್ಟದಲ್ಲಿ ಇರುತ್ತವೆ. ಇವು ಐಪಿಒಗೆ ಅರ್ಜಿ ಸಲ್ಲಿಸುತ್ತಿವೆ. ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವ ಸಾಂಪ್ರದಾಯಿಕ ವಿಧಾನಗಳು ಹೂಡಿಕೆದಾರರಿಗೆ ನೆರವಾಗಲಿಕ್ಕಿಲ್ಲ’ ಎಂದು ಸೆಬಿ ಅಭಿಪ್ರಾಯಪಟ್ಟಿತ್ತು.

ಪ್ರಸ್ತಾವ ಅಂತಿಮಗೊಳ್ಳುವುದಕ್ಕೂ ಮೊದಲೇ ಸೆಬಿ, ಈಚೆಗಿನ ವಾರಗಳಲ್ಲಿ ಹಲವು ಕಂಪನಿಗಳಿಗೆ ತಮ್ಮ ಹಣಕಾಸೇತರ ಮಾನದಂಡಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸುವಂತೆ ಸೂಚಿಸುತ್ತಿದೆ. ಅಲ್ಲದೆ, ಐಪಿಒ ಮೌಲ್ಯವನ್ನು ನಿಗದಿ ಮಾಡುವ ಸಂದರ್ಭದಲ್ಲಿ ಈ ಮಾನದಂಡಗಳನ್ನು ಯಾವ ರೀತಿಯಲ್ಲಿ ಪರಿಗಣಿಸಲಾಗಿದೆ ಎಂಬುದನ್ನು ವಿವರಿಸುವಂತೆಯೂ ಸೂಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ವಿಚಾರವಾಗಿ ಸೆಬಿ ಪ್ರತಿಕ್ರಿಯೆ ಸಿಕ್ಕಿಲ್ಲ. ಸೆಬಿ ಕೇಳುತ್ತಿರುವ ಇಂತಹ ಪ್ರಶ್ನೆಗಳು ಫಾರ್ಮ್‌ಈಸಿ ಕಂಪನಿಗೂ ಎದುರಾಗಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಕಂಪನಿಯು ಐಪಿಒಗೆ ಸಜ್ಜಾಗುತ್ತಿದೆ.

ಪೇಟಿಎಂ ಕಂಪನಿಯು ಷೇರುಪೇಟೆಯಲ್ಲಿ ನೋಂದಾಯಿತ ಆದ ನಂತರದಲ್ಲಿ, ಕಂಪನಿಗಳ ಮೌಲ್ಯಮಾಪನದ ಬಗ್ಗೆ ಕಳವಳಗಳು ವ್ಯಕ್ತವಾಗಿದ್ದವು. ಪೇಟೆಯಲ್ಲಿ ಷೇರುಗಳ ವಹಿವಾಟು ಆರಂಭವಾದ ದಿನವೇ ಅದರ ಮೌಲ್ಯವು ಕುಸಿದಿತ್ತು. ಈಗ ಅದು ಐಪಿಒ ಸಂದರ್ಭದ ಮೌಲ್ಯಕ್ಕಿಂತ ಶೇಕಡ 64ರಷ್ಟು ಕಡಿಮೆ ಮಟ್ಟದಲ್ಲಿ ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.