ADVERTISEMENT

ಜೂನ್‌ನಲ್ಲಿ ₹ 1.44 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಪಿಟಿಐ
Published 1 ಜುಲೈ 2022, 13:14 IST
Last Updated 1 ಜುಲೈ 2022, 13:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಜೂನ್‌ನಲ್ಲಿ ₹ 1.44 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

ಕಳೆದ ವರ್ಷದ ಜೂನ್‌ನಲ್ಲಿ ₹ 92,800 ಕೋಟಿ ವರಮಾನ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷದ ಜೂನ್‌ನಲ್ಲಿ ಶೇಕಡ 56ರಷ್ಟು ಹೆಚ್ಚು ವರಮಾನ ಸಂಗ್ರಹ ಆಗಿದೆ.

ಜಿಎಸ್‌ಟಿ ವ್ಯವಸ್ಥೆಯು ಜಾರಿಗೆ ಬಂದ ಬಳಿಕ ಐದನೇ ಬಾರಿಗೆ ತಿಂಗಳ ವರಮಾನ ಸಂಗ್ರಹವು ₹ 1.40 ಲಕ್ಷ ಕೋಟಿಯನ್ನು ದಾಟಿದಂತಾಗಿದೆ. 2022ರ ಮಾರ್ಚ್ ನಂತರ ಸತತ ನಾಲ್ಕನೇ ಬಾರಿಗೆ ಈ ಗಡಿ ದಾಟಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಜೂನ್‌ನಲ್ಲಿ ಸರಕುಗಳ ಆಮದು ಮೂಲಕ ಸಂಗ್ರಹ ಆಗಿರುವ ವರಮಾನವು ಕಳೆದ ವರ್ಷದ ಜೂನ್‌ನಲ್ಲಿ ಆಗಿದ್ದ ವರಮಾನ ಸಂಗ್ರಹಕ್ಕಿಂತಲೂ ಶೇ 55ರಷ್ಟು ಹೆಚ್ಚಿಗೆ ಇದೆ. ಅದೇ ರೀತಿ, ದೇಶಿ ವಹಿವಾಟಿನ ಮೂಲಕ (ಸೇವೆಗಳ ಆಮದನ್ನೂ ಒಳಗೊಂಡು) ಸಂಗ್ರಹ ಆಗಿರುವ ವರಮಾನವು ಕಳೆದ ವರ್ಷದ ಜೂನ್‌ಗಿಂತಲೂ ಶೇ 56ರಷ್ಟು ಹೆಚ್ಚಿಗೆ ಇದೆ.

2022ರ ಮೇ ತಿಂಗಳಿನಲ್ಲಿ 7.3 ಕೋಟಿ ಇ–ವೇ ಬಿಲ್‌ ಸೃಷ್ಟಿಯಾಗಿದೆ. ಏಪ್ರಿಲ್‌ನಲ್ಲಿ ಆಗಿದ್ದ 7.4 ಕೋಟಿಗೆ ಹೋಲಿಸಿದರೆ ಶೇ 2ರಷ್ಟು ಕಡಿಮೆ ಆಗಿದೆ ಎಂದು ಹೇಳಿದೆ.

ಜಿಎಸ್‌ಟಿ ಸಂಗ್ರಹ ವಿವರ (ಕೋಟಿಗಳಲ್ಲಿ)

ಜನವರಿ; ₹ 1,40,986

ಫೆಬ್ರುವರಿ; ₹1,33,026

ಮಾರ್ಚ್‌; ₹ 1,42,095

ಏಪ್ರಿಲ್‌; ₹ 1,67,540

ಮೇ; ₹ 1,40,885

ಜೂನ್‌; ₹ 1,44,616

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.