ADVERTISEMENT

ನೂತನ ಕೈಗಾರಿಕಾ ನೀತಿ ಅಳವಡಿಕೆಗೆ ಚಿಂತನೆ: ₹ 5 ಲಕ್ಷ ಕೋಟಿ ಹೂಡಿಕೆ ಗುರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:51 IST
Last Updated 16 ಅಕ್ಟೋಬರ್ 2019, 19:51 IST

ಬೆಂಗಳೂರು: ನೂತನ ಕೈಗಾರಿಕಾ ನೀತಿಯಲ್ಲಿ ₹5 ಲಕ್ಷ ಕೋಟಿ ಹೂಡಿಕೆಯ ಗುರಿ ಹೊಂದಲಾಗಿದ್ದು, ಉದ್ಯೋಗ ಸೃಷ್ಟಿಗೂ ಒತ್ತು ನೀಡಲು ನಿರ್ಧರಿಸಲಾಗಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಕೈಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಮಹತ್ವದ ಸಭೆ ನಡೆಸಿ, ನೂತನ ಕೈಗಾರಿಕಾ ನೀತಿಯ ಕರಡು ರಚನೆ ಬಗ್ಗೆ ಚರ್ಚಿಸಿದರು.

ಹಿಂದಿನ ಕೈಗಾರಿಕಾ ನೀತಿಯಲ್ಲಿ ₹5 ಲಕ್ಷ ಕೋಟಿ ಹೂಡಿಕೆ ಗುರಿ ಹೊಂದಿದ್ದರೂ ₹3.75 ಲಕ್ಷ ಕೋಟಿ ಹೂಡಿಕೆಯಾಗಿತ್ತು. ಜತೆಗೆ 20 ಲಕ್ಷ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿತ್ತು. ಹೊಸ ನೀತಿಯಲ್ಲೂ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು. ಮಹಿಳಾ ಉದ್ಯಮಿಗಳು, ಸೂಕ್ಷ್ಮ, ಸಣ್ಣ ಉದ್ದಿಮೆದಾರರಿಗೂ ಸಹಕಾರಿಯಾಗುವಂತೆ ನೀತಿ ರೂಪಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಗುಜರಾತ್‌ನಲ್ಲಿ ‘ವಿಶೇಷ ಹೂಡಿಕೆ ವಲಯ’ಕ್ಕೆ ಆದ್ಯತೆ ನೀಡಿದ್ದು, ನಮ್ಮಲ್ಲೂ ಪರಿಗಣಿಸಬಹುದು. ಈ ಬಗ್ಗೆ ಅಧ್ಯಯನ ನಡೆಸಿ ಅನುಷ್ಠಾನಕ್ಕೆ ತರುವಂತೆ ಆದೇಶಿಸಿದರು.

ಬಹುತೇಕರು ಬೆಂಗಳೂರಿನಲ್ಲೇ ಹೂಡಿಕೆ ಮಾಡಲು ಮುಂದಾಗುತ್ತಾರೆ. ಅದರ ಬದಲು ಎರಡನೇ ಹಂತದ ನಗರಗಳಲ್ಲಿ ಮೂಲಸೌಕರ್ಯ ಕಲ್ಪಿಸಿದರೆ ಅಂತಹ ನಗರಗಳಲ್ಲೂ ಬಂಡವಾಳ ತೊಡಗಿಸಲು ಸಹಕಾರಿಯಾಗುತ್ತದೆ. ಈಗಾಗಲೇ 9 ಜಿಲ್ಲೆಗಳಲ್ಲಿ ವಿವಿಧ ವಲಯಗಳ ಕ್ಲಸ್ಟರ್ ನಿರ್ಮಾಣ ಪ್ರಗತಿಯಲ್ಲಿದ್ದು, ಹೂಡಿಕೆದಾರರನ್ನು ಇತ್ತ ಸೆಳೆಯಲು ಅಗತ್ಯ ಸೌಕರ್ಯ ಕಲ್ಪಿಸಬೇಕು. ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಕಳೆದ ಬಜೆಟ್‌ನಲ್ಲಿ ಘೋಷಿಸಿರುವ ‘ಸಾರ್ಥಕ್’ ಯೋಜನೆ ಅನುಷ್ಠಾನಕ್ಕೆ ಒತ್ತುನೀಡುವಂತೆಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಬೆಂಗಳೂರು– ಮುಂಬೈ ನಡುವಿನ ಆರ್ಥಿಕ ವಲಯದ ಕೆಲಸ ಚುರುಕುಗೊಳಿಸಬೇಕು, ಕೈಗಾರಿಕೆಗಳಿಗೆ ಭೂಮಿ ಹಂಚಿಕೆ ಮಾಡಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು, ಕೈಗಾರಿಕಾ ಟೌನ್‌ಶಿಪ್ ನಿರ್ಮಾಣದಲ್ಲಿ ಗುಜರಾತ್, ತಮಿಳುನಾಡು ಯಶಸ್ವಿಯಾಗಿದ್ದು, ಈ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಶೆಟ್ಟರ್ ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್‌ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.