ADVERTISEMENT

ಮತ್ತೆ ಏರಿಕೆಯ ಹಾದಿಗೆ ಚಿಲ್ಲರೆ ಹಣದುಬ್ಬರ

ಪಿಟಿಐ
Published 12 ಸೆಪ್ಟೆಂಬರ್ 2022, 18:29 IST
Last Updated 12 ಸೆಪ್ಟೆಂಬರ್ 2022, 18:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮೂರು ತಿಂಗಳುಗಳಿಂದ ಇಳಿಕೆಯ ಹಾದಿಯಲ್ಲಿ ಇದ್ದ ಚಿಲ್ಲರೆ ಹಣದುಬ್ಬರ ದರವು ಆಗಸ್ಟ್‌ನಲ್ಲಿ ಶೇಕಡ 7ಕ್ಕೆ ಏರಿಕೆ ಆಗಿದೆ. ಆಹಾರ ವಸ್ತುಗಳ ಬೆಲೆ ಹೆಚ್ಚಳವು ಹಣದುಬ್ಬರ ಏರಿಕೆಗೆ ಕಾರಣ.

ಹಣದುಬ್ಬರಕ್ಕೆ ಕಡಿವಾಣ ಹಾಕಲು, ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಈ ತಿಂಗಳಲ್ಲಿ ರೆಪೊ ದರವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆ ಇದೆ.

ಆರ್‌ಬಿಐ ರೆಪೊ ದರವನ್ನು ತೀರ್ಮಾನಿಸುವಾಗ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಸತತ ಎಂಟು ತಿಂಗಳುಗಳಿಂದ ಗರಿಷ್ಠ ಮಿತಿಯನ್ನು (ಶೇ 6) ಮೀರಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 6ರೊಳಗೆ ಇರಿಸಬೇಕಾದ ಹೊಣೆ ಆರ್‌ಬಿಐ ಮೇಲಿದೆ.

ADVERTISEMENT

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6.71ರಷ್ಟಾಗಿತ್ತು. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಶೇ 5.3ರಷ್ಟು ಇತ್ತು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯ ಸಭೆಯ ಈ ತಿಂಗಳ 28ರಿಂದ 30ರವರೆಗೆ ಸಭೆ ನಡೆಸಲಿದೆ. ಈ ಸಭೆಯಲ್ಲಿ ರೆಪೊ ದರ ಏರಿಕೆ ಕುರಿತು ತೀರ್ಮಾನವಾಗುತ್ತದೆ.

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ ಈ ವರ್ಷದಲ್ಲಿ ರೆಪೊ ದರವನ್ನು ಒಟ್ಟು ಶೇ 1.40ರಷ್ಟು ಹೆಚ್ಚಿಸಿದೆ. ‘ಸೆಪ್ಟೆಂಬರ್ ತಿಂಗಳ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ 0.50ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

‘ರೆಪೊ ದರವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ, ಠೇವಣಿಗಳಿಗೆ ಈಗ ಸಿಗುತ್ತಿರುವ ನಕಾರಾತ್ಮಕ ವಾಸ್ತವ ಬಡ್ಡಿಯ ಸಮಸ್ಯೆಯನ್ನು ಪರಿಹರಿಸಬಹುದು. ಅಕ್ಟೋಬರ್‌ ನಂತರದಲ್ಲಿ ಹಣದುಬ್ಬರ ಪ್ರಮಾಣವು ಕಡಿಮೆ ಆಗಬಹುದು’ ಎಂದು ಆರ್‌ಬಿಐ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಮೃದುಲ್ ಸಗ್ಗರ್ ಹೇಳಿದ್ದಾರೆ.

ಹಣದುಬ್ಬರ ಪ್ರಮಾಣವನ್ನು ನಿರ್ಧರಿಸಲು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ನಗರ ಪ್ರದೇಶಗಳ 1,114 ಮಾರುಕಟ್ಟೆಗಳು ಹಾಗೂ ಗ್ರಾಮೀಣ ಪ್ರದೇಶಗಳ 1,181 ಮಾರುಕಟ್ಟೆಗಳಿಂದ ಅಂಕಿ–ಅಂಶಗಳನ್ನು ಸಂಗ್ರಹಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇ 7.15ರಷ್ಟಿದೆ, ನಗರ ಪ್ರದೇಶಗಳಲ್ಲಿ ಶೇ 6.72ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.