ADVERTISEMENT

ಇನ್ಫಿ: ₹ 4,110 ಕೋಟಿ ಲಾಭ

ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದ ಹಣಕಾಸು ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 17:20 IST
Last Updated 16 ಅಕ್ಟೋಬರ್ 2018, 17:20 IST
ಸಂಸ್ಥೆಯ ಸಿಒಒ ಯು. ಬಿ. ಪ್ರವೀಣರಾವ್‌, ಸಿಇಒ ಸಲೀಲ್‌ ಪಾರೇಖ್‌ ಮತ್ತು ಸಂಸ್ಥೆಯಿಂದ ನಿರ್ಗಮಿಸಲಿರುವ ಸಿಎಫ್‌ಒ ರಂಗನಾಥ್‌ ರಾವ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು  – ಪ್ರಜಾವಾಣಿ ಚಿತ್ರ
ಸಂಸ್ಥೆಯ ಸಿಒಒ ಯು. ಬಿ. ಪ್ರವೀಣರಾವ್‌, ಸಿಇಒ ಸಲೀಲ್‌ ಪಾರೇಖ್‌ ಮತ್ತು ಸಂಸ್ಥೆಯಿಂದ ನಿರ್ಗಮಿಸಲಿರುವ ಸಿಎಫ್‌ಒ ರಂಗನಾಥ್‌ ರಾವ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು  – ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶದಎರಡನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್‌, ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ
ತ್ರೈಮಾಸಿಕದಲ್ಲಿ ₹ 4,110 ಕೋಟಿ ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ಇದೇ ಅವಧಿಯಲ್ಲಿ ₹ 3,726 ಕೋಟಿ ನಿವ್ವಳ ಲಾಭ ಗಳಿಸಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಲಾಭದ ಪ್ರಮಾಣವು ಶೇ 10.3ರಷ್ಟು ಏರಿಕೆಯಾಗಿದೆ.ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ ಸಂಸ್ಥೆಯ ವರಮಾನವು ಶೇ 17.3ರಷ್ಟು ಏರಿಕೆಯಾಗಿದೆ.

2017–18ರ ಇದೇ ಅವಧಿಯಲ್ಲಿನ ₹ 17,567 ಕೋಟಿಗೆ ಹೋಲಿಸಿದರೆ ಈ ಬಾರಿ ₹ 20,609 ಕೋಟಿ ವರಮಾನ ಗಳಿಸಿದೆ.

ADVERTISEMENT

‘ಈ ತ್ರೈಮಾಸಿಕದಲ್ಲಿ ವಹಿವಾಟಿನ ಎಲ್ಲ ವಿಭಾಗಗಳಲ್ಲಿ ಸಂಸ್ಥೆಯ ಉತ್ತಮ ಸಾಧನೆಯು ತೃಪ್ತಿದಾಯಕವಾಗಿದೆ. ಸಂಸ್ಥೆಯ ಗ್ರಾಹಕರ ಜತೆಗಿನ ಗಟ್ಟಿ ಬಾಂಧವ್ಯಕ್ಕೆ ಇದು ನಿದರ್ಶನವಾಗಿದೆ. ಗ್ರಾಹಕರ ಅಗತ್ಯಗಳನ್ನೆಲ್ಲ ಈಡೇರಿಸಲು ಸಂಪೂರ್ಣ ಗಮನ ಕೇಂದ್ರೀಕರಿಸಲಾಗಿತ್ತು. ಒಟ್ಟಾರೆ ವರಮಾನದಲ್ಲಿ ಡಿಜಿಟಲ್‌ ವಹಿವಾಟಿನ ಪಾಲು ಶೇ 31ರಷ್ಟು ಇದೆ’ ಎಂದು ಸಂಸ್ಥೆಯ ಸಿಇಒ ಸಲೀಲ್‌ ಪಾರೇಖ್‌ ಹೇಳಿದ್ದಾರೆ.

‘ಈ ತ್ರೈಮಾಸಿಕ ಅವಧಿಯಲ್ಲಿ ₹ 14,400 ಕೋಟಿಗಳಷ್ಟು ಮೊತ್ತದ ದೊಡ್ಡ ವಹಿವಾಟಿನ ಒಪ್ಪಂದವು ಸಂಸ್ಥೆಯ ಹೊಸ ಗ್ರಾಹಕರ ಸಂಖ್ಯೆಯಲ್ಲಿನ ಹೆಚ್ಚಳವನ್ನು ತೋರಿಸುತ್ತದೆ. ಉತ್ತಮ ಬೆಳವಣಿಗೆಯ ಸಾಧ್ಯತೆಯ ನಿದರ್ಶನವೂ ಇದಾಗಿದೆ’ ಎಂದು ಹೇಳಿದ್ದಾರೆ.

ಮಧ್ಯಂತರ ಲಾಭಾಂಶ: ಪ್ರತಿ ಷೇರಿಗೆ ₹ 7ರಂತೆ ಸಂಸ್ಥೆಯು ಮಧ್ಯಂತರ ಲಾಭಾಂಶ ಘೋಷಿಸಿದೆ.

ಬನ್ಸಲ್‌ಗೆ₹ 12.17 ಕೋಟಿ:ಕೋರ್ಟ್‌ ತೀರ್ಪಿನ ಅನ್ವಯ, ಸಂಸ್ಥೆಯ ಮಾಜಿ ಸಿಎಫ್‌ಒ ರಾಜೀವ್‌ ಬನ್ಸಲ್‌ಗೆ ₹ 12.17 ಕೋಟಿ ಪಾವತಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.