ADVERTISEMENT

ಷೇರುಪೇಟೆ ಮುನ್ನೋಟ: ಜಾಗತಿಕ ವಿದ್ಯಮಾನಗಳು, ಕೋವಿಡ್‌ ಪ್ರಕರಣದ ಪ್ರಭಾವ

ಪಿಟಿಐ
Published 21 ಜೂನ್ 2020, 14:06 IST
Last Updated 21 ಜೂನ್ 2020, 14:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಾಗತಿಕ ವಿದ್ಯಮಾನಗಳು ಮತ್ತು ಕೋವಿಡ್‌ ಪೀಡಿತರ ಸಂಖ್ಯೆಯಲ್ಲಿನ ಹೆಚ್ಚಳವು ಷೇರುಪೇಟೆಯ ವಾರದ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ನಗದು ಲಭ್ಯತೆ ಸುಧಾರಿಸುತ್ತಿದ್ದು, ಸದ್ಯದ ಮಟ್ಟಿಗೆ ಷೇರುಪೇಟೆಗಳಲ್ಲಿ ಸಕಾರಾತ್ಮಕ ಚಲನೆ ಮುಂದುವರಿಯುವ ನಿರೀಕ್ಷೆ ಇದೆ ಎಂದೂ ಹೇಳಿದ್ದಾರೆ.

‘ಸರ್ಕಾರಿ ಬಾಂಡ್‌ಗಳ ಜೂನ್‌ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯವಾಗಲಿದೆ. ಇದು ಸಹ ಹೂಡಿಕೆಯ ಮೇಲೆ ಪರಿಣಾಮ ಬೀರಲಿದೆ’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ADVERTISEMENT

‘ಕೆಲವು ನಿರ್ದಿಷ್ಟ ಷೇರುಗಳ ಮೌಲ್ಯದಲ್ಲಿನ ಏರಿಳಿತದ ಜತೆಗೆ ಜಾಗತಿಕ ಷೇರುಪೇಟೆಗಳು ಹಾಗೂ ವಿದೇಶಿ ಬಂಡವಾಳ ಒಳಹರಿವು ಸಹ ಸೂಚ್ಯಂಕದ ದಿಕ್ಕನ್ನು ನಿರ್ಧರಿಸಲಿವೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ ಆಗಲಿರುವ ಏರಿಳಿತ, ಕಚ್ಚಾ ತೈಲ ದರದಲ್ಲಿನ ಬದಲಾವಣೆಯೂ ಪ್ರಭಾವ ಬೀರಲಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಜಾಗತಿಕ ಮತ್ತು ದೇಶಿ ಮಟ್ಟದಲ್ಲಿ ಯಾವುದೇ ಪ್ರಮುಖ ಆರ್ಥಿಕವಿದ್ಯಮಾನಗಳು ಇಲ್ಲದೇ ಇರುವುದರಿಂದ ಕೋವಿಡ್‌ ಪ್ರಕರಣಗಳ ಪ್ರಭಾವವೇ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಸೂಚ್ಯಂಕವು ಏರಿಕೆ ಅಥವಾ ಇಳಿಕೆ ಕಾಣಬಹುದು.

ಕೋವಿಡ್‌ ಬಿಕ್ಕಟ್ಟಿನಿಂದ ಹೊರಬಂದು ಆರ್ಥಿಕತೆಯು ಬಹಳ ವೇಗವಾಗಿ ಚೇತರಿಸಿಕೊಳ್ಳುವಂತೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎನ್ನುವುದು ಕೆಲವು ತಜ್ಞರ ಅಭಿಪ್ರಾಯವಾಗಿದೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಮತ್ತೆ ಆರಂಭವಾಗುತ್ತಿವೆ. ಇದು ಷೇರುಪೇಟೆಯಲ್ಲಿ ಉತ್ಸಾಹ ಮೂಡಿಸುವಂತೆ ಮಾಡುತ್ತಿದೆ ಎಂದೂ ಹೇಳಿದ್ದಾರೆ.

ಹಿಂದಿನ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದೆ. ಷೇರುಪೇಟೆಯ ಬಂಡವಾಳ ಮೌಲ್ಯ₹ 134 ಲಕ್ಷ ಕೋಟಿಗಳಿಂದ ₹ 137.50 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ

ಅಂಕಿ–ಅಂಶ

951 ಅಂಶ - ಹಿಂದಿನ ವಾರ ಬಿಎಸ್‌ಇ ಏರಿಕೆ

153 ಅಂಶ -ಹಿಂದಿನ ವಾರ ನಿಫ್ಟಿ ಏರಿಕೆ

₹ 3.5 ಲಕ್ಷ ಕೋಟಿ - ಹೂಡಿಕೆದಾರರ ಸಂಪತ್ತಿನಲ್ಲಿ ಆಗಿರುವ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.