ADVERTISEMENT

ಹೆಚ್ಚಿದ ಬಿಸಿಲ ಝಳ: ಮಲ್ಲಿಗೆ ಇಳುವರಿ ಕುಂಠಿತ

ನೀರಿಲ್ಲದೆ ಬೆಳೆಗಾರರು ಕಂಗಾಲು

ಕೆ.ಸೋಮಶೇಖರ
Published 2 ಮೇ 2024, 22:31 IST
Last Updated 2 ಮೇ 2024, 22:31 IST
ಹೂವಿನಹಡಗಲಿ ತಾಲ್ಲೂಕಿನ ವಿನೋಬನಗರದಲ್ಲಿ ಇರುವ ಮಲ್ಲಿಗೆ ತೋಟ
ಹೂವಿನಹಡಗಲಿ ತಾಲ್ಲೂಕಿನ ವಿನೋಬನಗರದಲ್ಲಿ ಇರುವ ಮಲ್ಲಿಗೆ ತೋಟ   

ಹೂವಿನಹಡಗಲಿ: ಬಿಸಿಲಿನ ತಾಪ ಹೆಚ್ಚಳವು ತಾಲ್ಲೂಕಿನ ಮಲ್ಲಿಗೆ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಮಲ್ಲಿಗೆ ಋತು ಪ್ರಾರಂಭವಾಗಿ ಎರಡು ತಿಂಗಳಾಗಿದೆ. ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವಿಗೆ ಪ್ರತಿ ಕೆ.ಜಿಗೆ ₹400 ಬೆಲೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಇಲ್ಲ.

ಮಲ್ಲಿಗೆ ಕೃಷಿಗೆ ಗಿಡಗಳ ಬುಡದಲ್ಲಿ ತಂಪು, ಸಾಧಾರಣ ಉಷ್ಣಾಂಶ ಇರಬೇಕು. ಆದರೆ, ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಗಳು ಬತ್ತಿವೆ. ಬೆಳೆಗೆ ನೀರು ಪೂರೈಸಲು ಆಗುತ್ತಿಲ್ಲ. ಬಿಸಿಲ ಝಳವು ಕೃಷಿಯ ಮೇಲೆ ಪರಿಣಾಮ ಬೀರಿದೆ.

ADVERTISEMENT

‘ಮಲ್ಲಿಗೆ ಹೂವಿನ ಋತು ಪ್ರಾರಂಭದ ದಿನಗಳಲ್ಲಿ ಎಕರೆಗೆ 20ರಿಂದ 30 ಕೆ.ಜಿವರೆಗೆ ಸಿಗುತ್ತಿದ್ದ ಮೊಗ್ಗಿನ ಪ್ರಮಾಣವು 10ರಿಂದ 15 ಕೆ.ಜಿಗೆ ಕುಸಿದಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಮೊಗ್ಗು ಬಿರಿಯುತ್ತಿಲ್ಲ. ಬಿಸಿಲ ಝಳಕ್ಕೆ ಮೋಪು ಕತ್ತರಿಸುತ್ತಿದೆ’ ಎಂದು ವಿನೋಬನಗರದ ಮಲ್ಲಿಗೆ ಬೆಳೆಗಾರ ಗೋನಾಳ ಮಹಾಂತೇಶ ಹೇಳಿದರು.

‘ಬಿಸಿಲಿನಿಂದ ಮೊಗ್ಗಿನ ಗಾತ್ರವೂ ಚಿಕ್ಕದಾಗಿದೆ. ಕೋವಿಡ್ ವೇಳೆ ರೈತರು ಸಂಕಷ್ಟ ಅನುಭವಿಸಿದ್ದರು. ನಂತರದ ವರ್ಷ ಮಳೆ ಹೆಚ್ಚಾಗಿದ್ದರಿಂದ ತಂಪು ಹವೆಯಿಂದಾಗಿ ಮಲ್ಲಿಗೆ ಬೆಳೆಗೆ ಶೀಲಿಂದ್ರಕಾರಕ ರೋಗ ವ್ಯಾಪಿಸಿತು. ಕಳೆದ ನಾಲ್ಕು ವರ್ಷದಿಂದ ನಿರೀಕ್ಷಿತ ಇಳುವರಿ ಸಿಗದೆ ನಷ್ಟವಾಗಿದೆ’ ಎಂದು ರೈತ ಬಸವರೆಡ್ಡಿ ತಿಳಿಸಿದರು.

ತಾಲ್ಲೂಕಿನಲ್ಲಿ ಹಿಂದೆ ಸಾವಿರಾರು ಹೆಕ್ಟೇರ್‌ನಲ್ಲಿ ಮಲ್ಲಿಗೆ ಕೃಷಿ ಮಾಡಲಾಗುತ್ತಿತ್ತು. ಈಗ 120 ಹೆಕ್ಟೇರ್‌ಗೆ ಕುಸಿದಿದೆ. ಹೂವಿನಹಡಗಲಿ, ಹನಕನಹಳ್ಳಿ, ದೇವಗೊಂಡನಹಳ್ಳಿ, ಮಿರಾಕೊರನಹಳ್ಳಿ, ವಿನೋಬನಗರ, ಗುಜನೂರು, ಮುದೇನೂರು, ಹಾಲ್ ತಿಮ್ಲಾಪುರ, ಕೊಂಬಳಿ ಗ್ರಾಮಗಳಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿದೆ.

‘ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಲ್ಲಿಗೆ ಹೂವು ಇದ್ದರೂ ಹಡಗಲಿ ಮಲ್ಲಿಗೆಗೆ ಬೇಡಿಕೆ ಹೆಚ್ಚು. ಕೇಂದ್ರ ಸರ್ಕಾರವು ಇದಕ್ಕೆ ಭೌಗೋಳಿಕ ವೈಶಿಷ್ಟ್ಯ (ಜಿಐ) ಮಾನ್ಯತೆ ನೀಡಿದೆ. ಬೆಳೆಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕರೂ ನಮಗೆ ಅನುಕೂಲವಾಗಿಲ್ಲ’ ಎಂಬುದು ಬೆಳೆಗಾರರ ನೋವು.

ಮಲ್ಲಿಗೆ ತೋಟಗಳಿಗೆ ನಾಲ್ಕೈದು ದಿನಗಳಿಗೊಮ್ಮೆ ನೀರು ಹಾಯಿಸಿ ತಂಪಾಗಿ ಇಡಬೇಕು. ಸಮರ್ಪಕವಾಗಿ ಪೋಷಕಾಂಶ ನೀಡಿದರೆ ಇಳುವರಿ ಹೆಚ್ಚಲಿದೆ
ಸಿ.ಎಂ. ಕಾಲಿಬಾವಿ ಬೇಸಾಯ ತಜ್ಞ ಕೃಷಿ ಸಂಶೋಧನಾ ಕೇಂದ್ರ ಸಿರುಗುಪ್ಪ
ದಾವಣಗೆರೆ ಗದಗ ಹಾವೇರಿ ಮಾರುಕಟ್ಟೆಗೆ ಪ್ರತಿದಿನ 25 ರಿಂದ 30 ಕ್ವಿಂಟಲ್ ಮೊಗ್ಗು ಸಾಗಣೆ ಆಗುತ್ತಿತ್ತು. ಈಗ 12 ಕ್ವಿಂಟಲ್‌ಗೆ ಕುಸಿದಿದೆ
ಸುಭಾನ್, ಹೂವಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.