ADVERTISEMENT

ಕಾಶ್ಮೀರದಲ್ಲಿ ಕುಸಿದ ಉದ್ಯಮ| ₹18 ಸಾವಿರ ಕೋಟಿ ನಷ್ಟ; 4.96 ಲಕ್ಷ ಉದ್ಯೋಗ ನಷ್ಟ

ಸಿದ್ದರಾಜು ಎಂ.
Published 26 ಜನವರಿ 2020, 19:47 IST
Last Updated 26 ಜನವರಿ 2020, 19:47 IST
ಶ್ರೀನಗರದ ವಾಣಿಜ್ಯ ಕೇಂದ್ರವಾದ ಲಾಲ್‌ಚೌಕ ಬಿಕೊ ಎನ್ನುತ್ತಿರುವುದು (ಸಾಂದರ್ಭಿಕ ಚಿತ್ರ)
ಶ್ರೀನಗರದ ವಾಣಿಜ್ಯ ಕೇಂದ್ರವಾದ ಲಾಲ್‌ಚೌಕ ಬಿಕೊ ಎನ್ನುತ್ತಿರುವುದು (ಸಾಂದರ್ಭಿಕ ಚಿತ್ರ)   
""

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇಯ ವಿಧಿ ರದ್ದುಪಡಿಸಿದ ನಂತರ ಕಾಶ್ಮೀರ ಕಣಿವೆಯ ಹತ್ತು ಜಿಲ್ಲೆಗಳ ಕೈಗಾರಿಕೆ ಹಾಗೂ ಉದ್ಯಮ ವಲಯ ಸುಮಾರು₹ 18 ಸಾವಿರ ಕೋಟಿ ನಷ್ಟ ಅನುಭವಿಸಿದ್ದು, 4.96ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ.

ವಿಶೇಷ ಸ್ಥಾನಮಾನ ಹಿಂದೆ ಪಡೆದ ನಂತರ ರಾಜ್ಯದಲ್ಲಿ ಭುಗಿಲೇಳಬಹುದಾದ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ರಾಜ್ಯದಾದ್ಯಂತಅಂತರ್ಜಾಲ ಸೌಲಭ್ಯವನ್ನು ಸ್ಥಗಿತಗೊಳಿಸಿದ್ದರಿಂದ ಇ–ಕಾಮರ್ಸ್‌ ವಹಿವಾಟು ಸಂಪೂರ್ಣ ನೆಲಕಚ್ಚಿದೆ.

ರಾಜ್ಯದ ಶೇ 55ರಷ್ಟು ಜನಸಂಖ್ಯೆ ಹೊಂದಿರುವ ಶ್ರೀನಗರದ ಆರ್ಥಿಕ ಬೆನ್ನೆಲುಬಾದ ಪ್ರವಾಸೋದ್ಯಮ ಸ್ತಬ್ದಗೊಂಡಿದೆ. ಇಂಟರ್‌ನೆಟ್‌ ಸ್ಥಗಿತಗೊಂಡ ಪರಿಣಾಮರತ್ನಗಂಬಳಿ ಮತ್ತಿತರೆ ಕರಕುಶಲ ಸರಕುಗಳ ತಯಾರಿಕೆ ಉದ್ಯಮದ ರಫ್ತು ವಿಭಾಗದಲ್ಲಿಶೇ 62ರಷ್ಟು ನಷ್ಟ ಉಂಟಾಗಿದೆ ಎಂದು ಸರ್ಕಾರದ ವರದಿ ಹೇಳಿದೆ.

ADVERTISEMENT

‘ಇ–ಕಾಮರ್ಸ್‌ ವಲಯದಲ್ಲಿ3 ಸಾವಿರ ಕೋಟಿ ಮತ್ತು ಪ್ರವಾಸೋದ್ಯಮದಲ್ಲಿ ₹ 1,056 ಕೋಟಿ ನಷ್ಟ ಸಂಭವಿಸಿದೆ. ಇ–ಕಾಮರ್ಸ್‌ನಲ್ಲಿ 30 ಸಾವಿರ ಜನರು ಉದ್ಯೋಗ ಕಳೆದುಕೊಂಡು ತೊಂದರೆಗೆ ಸಿಲುಕಿದ್ದಾರೆ. ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ರತ್ನಗಂಬಳಿ, ಸಾರಿಗೆ ಸೇರಿದಂತೆ ಪ್ರತಿಯೊಂದು ಕ್ಷೇತ್ರವು ತೊಂದರೆಗೆ ಸಿಲುಕಿದೆ’ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾದ್ಯೋಮಿಗಳ ಸಂಘವು (ಕೆಸಿಸಿಐ) ನಡೆಸಿರುವ ಅಧ್ಯಯನದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2019ರ ಆಗಸ್ಟ್‌5 ರಿಂದ ಡಿಸೆಂಬರ್‌ 3ರವರೆಗೆ ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕೋದ್ಯೋಮಿಗಳ ಸಂಘ ಅಧ್ಯಯನ ನಡೆಸಿದ್ದು, ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಉದ್ಯೋಗ ಕಳೆದುಕೊಂಡ ಮಹಿಳೆಯರು: ‘ಮಹಿಳಾ ಸಬಲೀಕರಣದ ಮಾತನಾಡುವ ಕೇಂದ್ರ ಸರ್ಕಾರ, ಕರಕುಶಲ ಹಾಗೂ ರತ್ನಗಂಬಳಿ ತಯಾರಿಕಾ ವಲಯದಲ್ಲಿ ಸಾವಿರಾರು ಮಹಿಳೆಯರ ಉದ್ಯೋಗವನ್ನು ಕಿತ್ತುಕೊಂಡಿದೆ. ಪ್ರತ್ಯಕ್ಷ ಹಾಗೂ ಪರೋಕ್ಷ
ವಾಗಿ ಈ ಉದ್ಯಮ ಅವಲಂಬಿಸಿರುವ ಸಾವಿರಾರು ಕುಟುಂಬಗಳು ತೊಂದರೆಗೆ ಸಿಲುಕಿವೆ’ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಶೇಖ್‌ ಆಸಿಕ್‌ ಅಹಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಈಗಿರುವ ನಮ್ಮ ಉದ್ಯಮವನ್ನು ಉಳಿಸಬೇಕು. ಬೋಟ್‌ ಹೌಸ್‌, ಹೋಟೆಲ್‌ ಉದ್ಯಮ ನಂಬಿದ ಜನರ ಜೇಬು ಈಗ ಸಂಪೂರ್ಣ ಖಾಲಿಯಾಗಿದೆ. ರತ್ನಗಂಬಳಿ ಉದ್ಯಮದಲ್ಲಿ ಯಾವುದೇ ಹೊಸ ಆರ್ಡರ್‌ ಸಿಗುತ್ತಿಲ್ಲ. ಅಂತರ್ಜಾಲ ಸೌಲಭ್ಯ ರದ್ದು ಮಾಡಿದ ಕ್ರಮವು ಆರೋಗ್ಯ ಕ್ಷೇತ್ರದ ಮೇಲೆ ಅಷ್ಟಾಗಿ ದುಷ್ಪರಿಣಾಮ ಉಂಟು ಮಾಡಿಲ್ಲ’ ಎಂದು30 ವರ್ಷದ ಕಾರ್ಮಿಕ ಮೊಹಮ್ಮದ್‌ ಆಶ್ರಫ್‌ ಮಲ್ಲಿಕ್‌ ಹೇಳಿದರು.

ಈ ಕುರಿತುಪ್ರತಿಕ್ರಿಯಿಸಲುವಾಣಿಜ್ಯ ಮತ್ತು ಕೈಗಾರಿಕೆಯ ಇಲಾಖೆಯ ಹಿರಿಯ ಅಧಿಕಾರಿಗಳು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.