ADVERTISEMENT

ಇನ್ಫಿ: ಅಮೆರಿಕದಲ್ಲಿನ ವ್ಯಾಜ್ಯ ರದ್ದು

ಷೇರುಪೇಟೆಗೆ ಮಾಹಿತಿ ನೀಡಿದ ಕಂಪನಿ

ಪಿಟಿಐ
Published 22 ಮೇ 2020, 19:45 IST
Last Updated 22 ಮೇ 2020, 19:45 IST
ಇನ್ಫೋಸಿಸ್
ಇನ್ಫೋಸಿಸ್   

ನವದೆಹಲಿ : ಇನ್ಫೊಸಿಸ್‌ ವಿರುದ್ಧ ಕೇಳಿಬಂದಿದ್ದ ಲೆಕ್ಕಪತ್ರ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ಅಮೆರಿಕದ ಕೋರ್ಟ್‌ನಲ್ಲಿ ಹೂಡಲಾಗಿದ್ದ ಮೊಕದ್ದಮೆ ವಜಾಗೊಂಡಿದೆ.

ವರಮಾನ ಮತ್ತು ಲಾಭ ಹೆಚ್ಚಿಸಲುಕಂಪನಿಯ ಉನ್ನತ ಅಧಿಕಾರಿಗಳು ಲೆಕ್ಕಪತ್ರಗಳಲ್ಲಿ ಅಕ್ರಮಗಳನ್ನು ಎಸಗಿದ್ದಾರೆ ಎಂದು ಇನ್ಫೊಸಿಸ್‌ ಸಿಬ್ಬಂದಿ ಎಂದು ಹೇಳಿಕೊಂಡಿರುವ ಅನಾಮಧೇಯರು ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಆರೋಪಿಸಿದ್ದರು. ಕಂಪನಿ ವಿರುದ್ಧ ಕೇಳಿ ಬಂದಿದ್ದ ಆರೋಪಗಳನ್ನು ಇನ್ಫೊಸಿಸ್‌ ಬಹಿರಂಗಗೊಳಿಸಿತ್ತು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅಮೆರಿಕದ ಹೂಡಿಕೆದಾರರಿಗೆ ಆಗಿರುವ ನಷ್ಟ ವಸೂಲಿ ಮಾಡಲು ಸ್ಥಳೀಯವಾಗಿ ಕಂಪನಿ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು. ಇನ್ಫೊಸಿಸ್‌ನ ಷೇರುಗಳು ಭಾರತ ಮತ್ತು ಅಮೆರಿಕದ (ಅಮೆರಿಕನ್‌ ಡೆಪಾಸಿಟರಿ ರಿಸಿಪ್ಟ್‌– ಎಡಿಆರ್‌) ಷೇರುಪೇಟೆಗಳಲ್ಲಿ ವಹಿವಾಟು ನಡೆಸುತ್ತಿವೆ. 2018ರ ಜುಲೈ 7 ರಿಂದ 2019ರ ಅಕ್ಟೋಬರ್‌ 20ರವರೆಗೆ ಅಮೆರಿಕದ ಷೇರುಪೇಟೆಯಲ್ಲಿ ಕಂಪನಿಯ ಷೇರುಗಳನ್ನು ಖರೀದಿಸಿದವರ ಪರವಾಗಿ ನ್ಯೂಯಾರ್ಕ್‌ನ ಈಸ್ಟರ್ನ್‌ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿತ್ತು. ಫಿರ್ಯಾದಿದಾರರು ಈಗ ಸ್ವಯಂ ಪ್ರೇರಣೆಯಿಂದ ಮೊಕದ್ದಮ್ಮೆ ಹಿಂದೆ ಪಡೆದಿದ್ದಾರೆ ಎಂದು ಕಂಪನಿಯು ತಿಳಿಸಿದೆ.

ADVERTISEMENT

ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿರುವ ಆರೋಪಗಳ ಕುರಿತು ಅಮೆರಿಕದ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮಿಷನ್‌ (ಎಸ್‌ಇಸಿ) ತನ್ನ ತನಿಖೆ ಪೂರ್ಣಗೊಳಿಸಿದೆ ಎಂದು ಇನ್ಫೊಸಿಸ್‌ ಮಾರ್ಚ್‌ನಲ್ಲಿ ತಿಳಿಸಿತ್ತು. ತನಿಖೆ ಪೂರ್ಣಗೊಂಡಿರುವುದರ ಬಗ್ಗೆ ’ಎಸ್‌ಇಸಿ‘ ತನಗೆ ಮಾಹಿತಿ ನೀಡಿದೆ. ಈ ವಿಷಯದ ಬಗ್ಗೆ ‘ಎಸ್‌ಇಸಿ’ ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಾನು ನಿರೀಕ್ಷಿಸುವುದಿಲ್ಲ ಎಂದೂ ಕಂಪನಿಯು ಹೇಳಿತ್ತು.

ಅನಾಮಧೇಯರ ಆರೋಪಗಳ ಕುರಿತು ಕಂಪನಿಯ ಸ್ವತಂತ್ರ ತನಿಖೆ ಪೂರ್ಣಗೊಂಡಿದ್ದು, ಹಣಕಾಸು ಅವ್ಯವಹಾರ ಅಥವಾ ಕಂಪನಿಯ ಉನ್ನತ ಅಧಿಕಾರಿಗಳು ಲೆಕ್ಕಪತ್ರಗಳಲ್ಲಿ ನ್ಯಾಯಬಾಹಿರ ವಿಧಾನಗಳನ್ನು ಅನುಸರಿಸಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಇನ್ಫೊಸಿಸ್‌ ಜನವರಿಯಲ್ಲಿ ತಿಳಿಸಿತ್ತು. ಇದರಿಂದಾಗಿ ಕಂಪನಿಯ ಸಿಇಒ ಸಲೀಲ್‌ ಪಾರೇಖ್‌ ಮತ್ತು ಸಿಎಫ್‌ಒ ನೀಲಾಂಜನ್‌ ರಾಯ್ ಅವರು ಕಳಂಕ ಮುಕ್ತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.