ADVERTISEMENT

ಎಂಎಫ್‌: ಕುಸಿದ ಹೊಸ ಕೊಡುಗೆ

ಹೂಡಿಕೆದಾರರಲ್ಲಿ ಕಾಣದ ಖರೀದಿ ಉತ್ಸಾಹ

ಪಿಟಿಐ
Published 11 ಮೇ 2020, 19:30 IST
Last Updated 11 ಮೇ 2020, 19:30 IST
   

ನವದೆಹಲಿ: ಮ್ಯೂಚುವಲ್‌ ಫಂಡ್‌ ಕಂಪನಿಗಳ ಹೊಸ ನಿಧಿ ಕೊಡುಗೆಗಳು (ಎನ್‌ಎಫ್‌ಒ) ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿವೆ.

ದೇಶದಾದ್ಯಂತ ಜಾರಿಯಲ್ಲಿ ಇರುವ ದಿಗ್ಬಂಧನ ಮತ್ತು ಅದರಿಂದ ಹೂಡಿಕೆದಾರರ ಮೇಲೆ ಆಗಿರುವ ಒಟ್ಟಾರೆ ಪರಿಣಾಮದ ಫಲವಾಗಿ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆಗೆ ಸಲ್ಲಿಸುವ ‘ಎನ್‌ಎಫ್‌ಒ’ಗಳ ಸಂಖ್ಯೆ ಕುಸಿದಿದೆ.

ಜನವರಿಯಲ್ಲಿ ‘ಸೆಬಿ’ಗೆ 11 ‘ಎನ್‌ಎಫ್‌ಒ’ಗಳ ಪ್ರಸ್ತಾವ ಸಲ್ಲಿಕೆಯಾಗಿದ್ದರೆ, ಮಾರ್ಚ್‌ನಲ್ಲಿ 1 ಮತ್ತು ಏಪ್ರಿಲ್‌ನಲ್ಲಿ ಶೂನ್ಯಕ್ಕೆ ಇಳಿದಿದೆ. ಮಾರ್ಚ್‌ನಿಂದೀಚೆಗೆ ಕೇವಲ 3 ಕರಡು ದಾಖಲೆಗಳನ್ನು ಸಲ್ಲಿಸಲಾಗಿದೆ.

ADVERTISEMENT

‘ಮ್ಯೂಚುವಲ್‌ ಫಂಡ್‌ ಉದ್ದಿಮೆಯು ಸ್ಥಿರ ಆದಾಯ ನಿಧಿಗಳಲ್ಲಿನ ಹೂಡಿಕೆ ಹಿಂದೆ ಪಡೆಯುವ ಒತ್ತಡ ಎದುರಿಸುತ್ತಿದೆ. ‌ಸದ್ಯದ ಮಾರುಕಟ್ಟೆ ಪರಿಸ್ಥಿತಿಯು ಉತ್ತೇಜನಕಾರಿಯಾಗಿಲ್ಲ. ಹೀಗಾಗಿ ‘ಎನ್‌ಎಫ್‌ಒ’ಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ಕ್ವಾಂಟಂ ಮ್ಯೂಚುವಲ್‌ ಫಂಡ್‌ನ ಸಿಇಒ ಜಿಮ್ಮಿ ಪಟೇಲ್‌ ಹೇಳಿದ್ದಾರೆ.

‘ಉದ್ದಿಮೆಯಲ್ಲಿ ಹಣದ ಲಭ್ಯತೆ ಸಮಸ್ಯೆ ಇಲ್ಲ. ವಿಶ್ವಾಸದ ಕೊರತೆ ಇದೆ. ಆರ್ಥಿಕ ಮತ್ತು ಹಣಕಾಸು ಸ್ಥಿರತೆ ಕಂಡು ಬರುತ್ತಿದ್ದಂತೆ ‘ಎನ್‌ಎಫ್‌ಒ’ಗಳ ಸಂಖ್ಯೆ ಏರಿಕೆಯಾಗಲಿದೆ’ ಎಂದು ಆಶಿಕಾ ವೆಲ್ತ್‌ ಅಡ್ವೈಸರ್‌ನ ಸಿಇಒ ಅಮಿತ್‌ ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷದಲ್ಲಿ ಇದುವರೆಗೆ ’ಸೆಬಿ’ಗೆ 20 ‘ಎನ್‌ಎಫ್‌ಒ’ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. ಅನುಮೋದನೆ ದೊರೆತಿರುವ ಹೊಸ ನಿಧಿ ಕೊಡುಗೆಗಳನ್ನು ಈಗಾಗಲೇ ಆರಂಭಿಸಲಾಗಿದೆ.

ತಿಂಗಳು; ‘ಎನ್‌ಎಫ್‌ಒ’

ಜನವರಿ;11

ಫೆಬ್ರುವರಿ;06

ಮಾರ್ಚ್‌;01

ಏಪ್ರಿಲ್‌;00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.