ADVERTISEMENT

ಬಹುತೇಕ ರಾಜ್ಯಗಳು ತೆರಿಗೆ ವರಮಾನದಲ್ಲಿ ಅರ್ಧ ಪಾಲು ಕೇಳುತ್ತಿವೆ: ಅರವಿಂದ ಪನಗಢಿಯಾ

ಪಿಟಿಐ
Published 4 ಜೂನ್ 2025, 14:15 IST
Last Updated 4 ಜೂನ್ 2025, 14:15 IST
<div class="paragraphs"><p>ಅರವಿಂದ ಪನಗಢಿಯಾ –ಪಿಟಿಐ ಚಿತ್ರ</p></div>

ಅರವಿಂದ ಪನಗಢಿಯಾ –ಪಿಟಿಐ ಚಿತ್ರ

   

ಲಖನೌ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ವರಮಾನವನ್ನು ಶೇಕಡ 50ರ ಪ್ರಮಾಣದಲ್ಲಿ ಹಂಚಿಕೊಳ್ಳುವಂತೆ ಆಗಬೇಕು ಎಂಬ ಅಭಿಪ್ರಾಯವನ್ನು ಬಹುತೇಕ ರಾಜ್ಯಗಳು ದಾಖಲಿಸಿವೆ ಎಂದು16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಢಿಯಾ ತಿಳಿಸಿದ್ದಾರೆ.

ಈಗಿನ ವ್ಯವಸ್ಥೆಯಲ್ಲಿ ತೆರಿಗೆ ವರಮಾನದಲ್ಲಿ ರಾಜ್ಯಗಳಿಗೆ ಶೇ 41ರಷ್ಟು ಪಾಲು ಸಿಗುತ್ತಿದೆ. ಇನ್ನುಳಿದ ಮೊತ್ತವು ಕೇಂದ್ರ ಸರ್ಕಾರಕ್ಕೆ ಸಿಗುತ್ತದೆ. 

ADVERTISEMENT

ಸಮಾಲೋಚನೆಯ ಭಾಗವಾಗಿ ಹಣಕಾಸು ಆಯೋಗವು ಎಲ್ಲ ರಾಜ್ಯಗಳಿಗೆ ಭೇಟಿ ನೀಡುತ್ತಿದೆ. ಆಯೋಗದ ಇತರ ಸದಸ್ಯರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪನಗಢಿಯಾ ಅವರು ‘ತೆರಿಗೆ ವರಮಾನದಲ್ಲಿ ರಾಜ್ಯಗಳಿಗೆ ಶೇ 41ರಷ್ಟು, ಕೇಂದ್ರಕ್ಕೆ ಶೇ 59ರಷ್ಟು ಪಾಲು ಸಿಗಬೇಕು ಎಂದು ಹಿಂದಿನ ಹಣಕಾಸು ಆಯೋಗವು ಹೇಳಿತ್ತು. ಅದೇ ಈಗ ಚಾಲ್ತಿಯಲ್ಲಿದೆ’ ಎಂದು ತಿಳಿಸಿದರು.

ರಾಜ್ಯಗಳಿಗೆ ಸಿಗುವ ತೆರಿಗೆ ಪಾಲು ಶೇ 50ಕ್ಕೆ ಹೆಚ್ಚಳ ಆಗಬೇಕು ಎಂಬ ಬೇಡಿಕೆಯನ್ನು ಉತ್ತರ ಪ್ರದೇಶ ಸೇರಿದಂತೆ 22ಕ್ಕೂ ಹೆಚ್ಚು ರಾಜ್ಯಗಳು ಮಂಡಿಸಿವೆ ಎಂದು ಅವರು ಮಾಹಿತಿ ನೀಡಿದರು. ಆದರೆ, ಹಣಕಾಸು ಆಯೋಗವು ಇದನ್ನು ತನ್ನ ಶಿಫಾರಸಿನಲ್ಲಿ ಅಳವಡಿಸಲಿದೆಯೇ ಎಂಬ ಮಾಹಿತಿ ಒದಗಿಸಲು ಅವರು ನಿರಾಕರಿಸಿದರು.

ಹಣಕಾಸು ಆಯೋಗದ ಶಿಫಾರಸುಗಳನ್ನು ಅವು ಇರುವ ರೀತಿಯಲ್ಲೇ ಒಪ್ಪಿಕೊಳ್ಳುವ ಸಂಪ್ರದಾಯ ಬೆಳೆದುಬಂದಿದೆ ಎಂದು ಕೂಡ ಪನಗಢಿಯಾ ತಿಳಿಸಿದ್ದಾರೆ.

ತೆರಿಗೆ ವರಮಾನವನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳುವುದರ ಬಗ್ಗೆ ಆಯೋಗವು ಶಿಫಾರಸು ಸಲ್ಲಿಸಬೇಕಿದೆ. ಆಯೋಗವು ಅಕ್ಟೋಬರ್ 31ಕ್ಕೆ ಮೊದಲು ಶಿಫಾರಸು ಸಲ್ಲಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.