ADVERTISEMENT

‘ತಲೆಮರೆಸಿಕೊಂಡ ಅಪರಾಧಿ ಪಟ್ಟಆರ್ಥಿಕ ಮರಣ ದಂಡನೆ ಇದ್ದಂತೆ’

ಬಾಂಬೆ ಹೈಕೋರ್ಟ್‌ಗೆ ವಿಜಯ್‌ ಮಲ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:07 IST
Last Updated 24 ಏಪ್ರಿಲ್ 2019, 19:07 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ಮುಂಬೈ: ‘ವಿಶೇಷ ನ್ಯಾಯಾಲಯವು ನನ್ನನ್ನು ಪಲಾಯನ ಮಾಡಿರುವ ಅಪರಾಧಿ ಎಂದು ಘೋಷಿಸಿ ನನ್ನ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿರುವುದು ನನ್ನ ಪಾಲಿಗೆ ಆರ್ಥಿಕ ಮರಣ ದಂಡನೆಯಾಗಿದೆ’ ಎಂದು ಉದ್ಯಮಿ ವಿಜಯ್‌ ಮಲ್ಯ ಹೇಳಿಕೊಂಡಿದ್ದಾರೆ.

ನ್ಯಾಯಮೂರ್ತಿಗಳಾದ ರಂಜಿತ್‌ ಮೋರೆ ಮತ್ತು ಡಾಂಗ್ರೆ ಅವರಿದ್ದ ಪೀಠದ ಎದುರು ತಮ್ಮ ವಕೀಲ ದೇಸಾಯಿ ಅವರ ಮೂಲಕ ಮಲ್ಯ ಅವರು ಈ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಿಂದ ಜಾರಿಗೆ ಬಂದಿರುವ ‘ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ’ಯ ವಿವಿಧ ಪ್ರಸ್ತಾವಗಳನ್ನು ಪ್ರಶ್ನಿಸಿರುವ ತಮ್ಮ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮಲ್ಯ ತಮ್ಮ ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ನನ್ನ ಸಾಲ ಮತ್ತು ಅದರ ಮೇಲಿನ ಬಡ್ಡಿ ದಿನೇ ದಿನೇ ಬೆಳೆಯುತ್ತಿದೆ. ನನ್ನ ಬಳಿ ಇರುವ ಸಂಪತ್ತಿನಿಂದ ಈ ಸಾಲ ಮರುಪಾವತಿಸಲು ನಾನು ಬಯಸಿರುವೆ. ಆದರೆ, ಅದಕ್ಕೆ ಸರ್ಕಾರ ಅವಕಾಶ ನೀಡುತ್ತಿಲ್ಲ. ನನ್ನ ಸಂಪತ್ತಿನ ಮೇಲೆ ನನಗೆ ಈಗ ಅಧಿಕಾರವೇ ಇಲ್ಲದಂತಾಗಿದೆ. ಕೋರ್ಟ್‌ ನನಗೆ ವಿಧಿಸಿದ ಆರ್ಥಿಕ ಮರಣದಂಡನೆ ಇದಾಗಿದೆ’ ಎಂದು ಹೇಳಿದ್ದಾರೆ.

ದೇಶದಾದ್ಯಂತ ತಮ್ಮ ಕಕ್ಷಿದಾರನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ತಡೆ ನೀಡಬೇಕು ಎಂದು ವಕೀಲ ದೇಸಾಯಿ ಅವರು ಕೋರ್ಟ್‌ಗೆ ಮನವಿ ಮಾಡಿಕೊಂಡರು. ಪೀಠವು ಈ ಮನವಿಯನ್ನು ತಳ್ಳಿ ಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.