ADVERTISEMENT

ನೆಲಕಚ್ಚಿದ ಮಾವು: ₹ 22 ಕೋಟಿ ನಷ್ಟ

ಬಿರುಗಾಳಿ, ಆಲಿಕಲ್ಲು ಮಳೆಗೆ ಶೇ 60ರಷ್ಟು ಫಸಲು ನಷ್ಟ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 17:17 IST
Last Updated 23 ಏಪ್ರಿಲ್ 2019, 17:17 IST
ಶ್ರೀನಿವಾಸಪುರದ ಮಾವಿನ ಕಾಯಿ ಮಂಡಿಯೊಂದಲ್ಲಿ ರೈತರೊಬ್ಬರು ಉದುರಿದ ಮಾವಿನ ಕಾಯಿಯನ್ನು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ಇಳಿಸುತ್ತಿರುವುದು
ಶ್ರೀನಿವಾಸಪುರದ ಮಾವಿನ ಕಾಯಿ ಮಂಡಿಯೊಂದಲ್ಲಿ ರೈತರೊಬ್ಬರು ಉದುರಿದ ಮಾವಿನ ಕಾಯಿಯನ್ನು ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ಇಳಿಸುತ್ತಿರುವುದು   

ಶ್ರೀನಿವಾಸಪುರ: ‘ತಾಲ್ಲೂಕಿನಲ್ಲಿ ಮಳೆಯೊಂದಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲು ಹೊಡೆತದಿಂದ 1952 ಹೆಕ್ಟೆರ್‌ ಪ್ರದೇಶದಲ್ಲಿ ಬೆಳೆಯಲಾಗಿರುವ ಮಾವಿನ ಕಾಯಿ ನೆಲಕಚ್ಚಿದ್ದು, ಸುಮಾರು ₹ 22 ಕೋಟಿ ನಷ್ಟ ಉಂಟಾಗಿದೆ’ ಎಂದು ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ಹೇಳಿದರು.

ತಾಲ್ಲೂಕಿನ ಕಸಬಾ ಹೋಬಳಿ, ನಂಬಿಹಳ್ಳಿ, ಮಾಸ್ತೇನಹಳ್ಳಿ ಹಾಗೂ ಯಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯೊಂದಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲು ಹೊಡೆತದಿಂದ ಫಸಲು ನಷ್ಟ ಉಂಟಾಗಿದ್ದ ಮಾವಿನ ತೋಟಗಳಿಗೆ ಕಂದಾಯ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಾವಿನ ತೋಟಗಳಲ್ಲಿ ಶೇ 60ರಷ್ಟು ಫಸಲು ನಷ್ಟ ಸಂಭವಿಸಿದೆ’ ಎಂದು ಹೇಳಿದರು.

ADVERTISEMENT

‘ಮಾವು ಮತ್ತಿತರ ವಾರ್ಷಿಕ ಬೆಳೆಗಳಿಗೆ ನಷ್ಟ ಉಂಟಾದಾಗ ಹೆಕ್ಟೆರ್‌ಗೆ ₹ 18 ಸಾವಿರ ಹಾಗೂತರಕಾರಿ ಬೆಳೆಗಳಿಗೆ ₹ 13.5 ಸಾವಿರ ಪರಿಹಾರ ನೀಡಲಾಗುವುದು’ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಾ.ಕೃಷ್ಣಮೂರ್ತಿ ತಿಳಿಸಿದರು.

ಕೆ.ಜಿಗೆ ₹ 3: ಮಾವು ಬೆಳೆಗಾರರು ಮಂಗಳವಾರ ಉದುರಿದ ಮಾವನ್ನು ಟ್ರಾಕ್ಟರ್‌ಗಳಲ್ಲಿ ತುಂಬಿಕೊಂಡು ಬಂದು ಶ್ರೀನಿವಾಸಪುರದ ಮಾವಿನ ಕಾಯಿ ಮಂಡಿಗಳಲ್ಲಿ ಸುರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಂಡಿ ಮಾಲೀಕರು ಉದುರಿದ ಮಾವನ್ನು ಕೆಜಿಯೊಂದಕ್ಕೆ ₹ 3 ರಂತೆ ಖರೀದಿಸಿದರು. ಈ ಹಿಂದೆ ಕೆಜಿಯೊಂದಕ್ಕೆ ₹ 2 ನಿಗದಿಪಡಿಸಲಾಗಿತ್ತು. ಬಿದ್ದ ಕಾಯಿ ಆಯಲು ಕೃಷಿ ಕಾರ್ಮಿಕರ ಕೊರತೆ ಉಂಟಾಗಿತ್ತು. ಮನೆ ಮಂದಿಯೆಲ್ಲಾ ಕಾಯಿ ಆರಿಸುವ ಕಾಯಕದಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.