ADVERTISEMENT

ರೈಟ್‌ಆಫ್‌ ಆದ ಸಾಲದ ಮೊತ್ತ ₹ 10.09 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 20:09 IST
Last Updated 13 ಡಿಸೆಂಬರ್ 2022, 20:09 IST
   

ನವದೆಹಲಿ: ಕಳೆದ ಐದು ಹಣಕಾಸು ವರ್ಷಗಳಲ್ಲಿ ಬ್ಯಾಂಕ್‌ಗಳು ಒಟ್ಟು ₹ 10.09 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್‌ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.

‘ತಮ್ಮ ಲೆಕ್ಕಪತ್ರವನ್ನು ಸರಿಪಡಿಸಿಕೊಳ್ಳುವುದು, ತೆರಿಗೆ ಪ್ರಯೋಜನ ಪಡೆದುಕೊಳ್ಳುವುದು ಹಾಗೂ ಬಂಡವಾಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮಾಮೂಲಿ ಪ್ರಕ್ರಿಯೆಯ ಭಾಗವಾಗಿ ಬ್ಯಾಂಕ್‌ಗಳು ಆರ್‌ಬಿಐ ಮಾರ್ಗಸೂಚಿ ಹಾಗೂ ತಮ್ಮ ಆಡಳಿತ ಮಂಡಳಿಗಳು ಒಪ್ಪಿರುವ ನೀತಿಗಳಿಗೆ ಅನುಗುಣವಾಗಿ ಎನ್‌ಪಿಎಗಳನ್ನು (ವಸೂಲಾಗದ ಸಾಲ) ರೈಟ್‌ಆಫ್‌ ಮಾಡುತ್ತವೆ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.

ರೈಟ್‌ಆಫ್‌ ಮಾಡಿರುವ ಸಾಲವನ್ನು ತೀರಿಸುವ ಹೊಣೆಯು ಸಾಲ ಪಡೆದವರ ಮೇಲೆ ಇದ್ದೇ ಇರುತ್ತದೆ. ರೈಟ್‌ಆಫ್‌ ಆಗಿರುವ ಸಾಲದ ವಸೂಲಾತಿ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ. ಸಾಲ ಪಡೆದವರಿಗೆ ರೈಟ್‌ಆಫ್‌ ಮಾಡಿದ್ದರಿಂದಾಗಿ ಪ್ರಯೋಜನವೇನೂ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ರೈಟ್‌ಆಫ್‌ ಆಗಿದ್ದ ಸಾಲದ ಪೈಕಿ ಕಳೆದ ಐದು ವರ್ಷಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಒಟ್ಟು ₹ 1.32 ಲಕ್ಷ ಕೋಟಿಯನ್ನು ವಸೂಲಿ ಮಾಡಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.