ADVERTISEMENT

80,000ಕ್ಕೆ ಸೆನ್ಸೆಕ್ಸ್: ಮಾರ್ಗನ್‌ ಸ್ಟ್ಯಾನ್ಲಿ ಅಂದಾಜು

ಏಜೆನ್ಸೀಸ್
Published 28 ನವೆಂಬರ್ 2022, 15:37 IST
Last Updated 28 ನವೆಂಬರ್ 2022, 15:37 IST

ಮುಂಬೈ (ಪಿಟಿಐ/ರಾಯಿಟರ್ಸ್): 2023ರ ಡಿಸೆಂಬರ್‌ಗೆ ಮೊದಲು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 68,500 ಅಂಶಗಳಿಗೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮಾರ್ಗನ್‌ ಸ್ಟ್ಯಾನ್ಲಿ ಅಂದಾಜಿಸಿದೆ. ಜಾಗತಿಕ ಬಾಂಡ್‌ ಸೂಚ್ಯಂಕಗಳಲ್ಲಿ ಭಾರತ ಸೇರ್ಪಡೆ ಆದಲ್ಲಿ, ಕಚ್ಚಾ ತೈಲ ಹಾಗೂ ರಸಗೊಬ್ಬರದ ಬೆಲೆ ತೀವ್ರವಾಗಿ ಇಳಿಕೆ ಕಂಡಲ್ಲಿ ಸೆನ್ಸೆಕ್ಸ್‌ 80 ಸಾವಿರಕ್ಕೆ ತಲುಪಬಹುದು ಎಂದು ಕೂಡ ಅದು ಹೇಳಿದೆ.

ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮಗಳು 2023ಕ್ಕೂ ವಿಸ್ತರಣೆ ಆಗದಿದ್ದರೆ, ದೇಶದ ಬೆಳವಣಿಗೆಯು ಚೆನ್ನಾಗಿ ಇದ್ದರೆ ಮತ್ತು ಅಮೆರಿಕದಲ್ಲಿ ದೀರ್ಘ ಅವಧಿಗೆ ಆರ್ಥಿಕ ಹಿಂಜರಿತ ಇಲ್ಲದಿದ್ದರೆ ಸೆನ್ಸೆಕ್ಸ್ ಮುಂದಿನ ವರ್ಷದ ಅಂತ್ಯದೊಳಗೆ 68,500ಕ್ಕೆ ತಲುಪಬಹುದು ಎಂದು ಸಂಸ್ಥೆ ಅಂದಾಜಿಸಿದೆ.

ಸಂಸ್ಥೆಯ ಅರ್ಥಶಾಸ್ತ್ರಜ್ಞ ರಿಧಮ್ ದೇಸಾಯಿ ಅವರು ಸಿದ್ಧಪಡಿಸಿರುವ ವರದಿಯಲ್ಲಿ ಈ ವಿವರಗಳು ಇವೆ. ದೇಶದ ಷೇರುಪೇಟೆಗಳಲ್ಲಿ ಗೂಳಿಯ ಓಟಕ್ಕೆ ಅಡ್ಡಿ ಆಗಿಲ್ಲ ಎಂದು ವರದಿಯು ಸ್ಪಷ್ಟಪಡಿಸಿದೆ.

ADVERTISEMENT

ಕಳೆದ ಎರಡು ವರ್ಷಗಳಲ್ಲಿ ಷೇರುಪೇಟೆಗಳಲ್ಲಿ ದೊಡ್ಡ ಮಟ್ಟದ ಜಿಗಿತ ಕಂಡುಬಂದಿದ್ದಕ್ಕೆ ಮುಖ್ಯ ಕಾರಣಗಳನ್ನು ವರದಿಯು ಪಟ್ಟಿ ಮಾಡಿದೆ. ಸರ್ಕಾರದ ನೀತಿಗಳು, ದೇಶದಲ್ಲಿ ಈಕ್ವಿಟಿಗಳಲ್ಲಿ ಹಣ ತೊಡಗಿಸುವ ವಿಚಾರದಲ್ಲಿ ಆಗಿರುವ ಬದಲಾವಣೆಗಳು, ಎಫ್‌ಡಿಐ ಹರಿವಿನ ಮೇಲೆ ಆದ್ಯತೆ... ಮುಂತಾದವು ಈ ಏರಿಕೆಗೆ ಕಾರಣ ಎಂದು ವರದಿ ಹೇಳಿದೆ. ನಿಫ್ಟಿ ಯಾವ ಹಂತವನ್ನು ತಲುಪಲಿದೆ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.