ADVERTISEMENT

ಮಾರಾಟ, ಖರೀದಿ ವ್ಯತ್ಯಾಸದ ಮೋಸ

ಎಂ.ಎನ್.ಯೋಗೇಶ್‌
Published 5 ಫೆಬ್ರುವರಿ 2019, 19:30 IST
Last Updated 5 ಫೆಬ್ರುವರಿ 2019, 19:30 IST
ನಂದಿನಿ
ನಂದಿನಿ   

‘ನಂದಿನಿ’ ಉತ್ಪನ್ನಗಳು ಎಂದೊಡನೆ ಉತ್ತಮ ಗುಣಮಟ್ಟದ ಬ್ರ್ಯಾಂಡ್‌ ಎಂಬ ನಂಬಿಕೆ ಜನಮಾನಸದಲ್ಲಿದೆ. ಹಾಲು, ಮೊಸರು, ಬೆಣ್ಣೆ, ತುಪ್ಪ, ಮಿಠಾಯಿ, ಐಸ್‌ಕ್ರೀಂ, ಚಾಕಲೇಟ್‌ ಸೇರಿ ನೂರಾರು ನಂದಿನಿ ಉತ್ಪನ್ನಗಳು ಗ್ರಾಹಕರ ಗಮನ ಸೆಳೆದಿವೆ. ಸ್ಯಾಂಡಲ್‌ವುಡ್‌ ಸೂಪರ್‌ಸ್ಟಾರ್‌ಗಳು ಈ ಉತ್ಪನ್ನಗಳ ರಾಯಭಾರಿಯಾಗಿದ್ದು ಜಾಹೀರಾತುಗಳ ಮೂಲಕ ಗಮನ ಸೆಳೆಯುತ್ತಾರೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಹೈನುಗಾರಿಕೆಗೆ ಉದ್ಯಮ ರೂಪ ಕೊಟ್ಟಿದ್ದು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತದೆ.

ರಾಜ್ಯದಲ್ಲಿ 25 ಲಕ್ಷ ಹಾಲು ಉತ್ಪಾದಕರಿದ್ದಾರೆ. ಮಹಾಮಂಡಳದಡಿ 14 ಸಹಕಾರ ಒಕ್ಕೂಟಗಳಿದ್ದು ಗ್ರಾಮೀಣ ರೈತರಿಂದ ಹಾಲು ಖರೀದಿಸಲಾಗುತ್ತದೆ. ನಂದಿನಿ ಉತ್ಪನ್ನಗಳಿಗೆ ರಾಜ್ಯದಾದ್ಯಂತ ಏಕರೂಪ ದರವಿದೆ. ವಿವಿಧ ಬ್ರ್ಯಾಂಡ್‌ಗಳ ಪ್ರತಿ ಲೀಟರ್‌ ಹಾಲಿಗೆ
₹ 35ರಿಂದ ₹ 50ರವರೆಗೆ ನಿಗದಿ ಮಾಡಲಾಗಿದೆ.

ನಂದಿನಿ ಉತ್ಪನ್ನಗಳ ಹಿಂದೆ ರಾಜ್ಯದ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಶ್ರಮವಿದೆ. ಹಸುವಿಗೆ ಹುಲ್ಲು, ನೀರು, ಆಹಾರ (ಪೀಡ್ಸ್‌) ಹಾಕುತ್ತಾ ಗುಣಮಟ್ಟದ ಹಾಲು ಹಿಂಡುತ್ತಾರೆ. ಹಾಲು ಉತ್ಪಾದಕರ ಸಹಕಾರ ಸಂಘ ಕಟ್ಟಿಕೊಂಡಿರುವ ರೈತ ಮಹಿಳೆಯರು ನಿತ್ಯ ಮುಂಜಾನೆ, ಸಂಜೆ ಹಾಲು ಕರೆದು ಡೇರಿಗೆ ಹಾಕುತ್ತಾರೆ.

ADVERTISEMENT

ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಸದಾ ಏರುಮುಖವಾಗಿರುತ್ತದೆ. ಆದರೆ, ರೈತರಿಂದ ಖರೀದಿ ಮಾಡುವ ಹಾಲಿನ ದರ ಸದಾ ಇಳಿಮುಖವಾಗಿರುತ್ತದೆ. ಸಹಕಾರ ಒಕ್ಕೂಟಗಳಿಗೆ ಬೆಲೆ ನಿಗದಿ ಸ್ವಾಯತ್ತತೆ ನೀಡಲಾಗಿದೆ. ಒಕ್ಕೂಟಗಳ ಪದಾಧಿಕಾರಿ ಸ್ಥಾನಗಳಲ್ಲಿ ರಾಜಕಾರಣಿಗಳೇ ತುಂಬಿ ತುಳುಕುತ್ತಿದ್ದು ಅವರು ರೈತ ಮಹಿಳೆಯರಿಗೆ ಅನ್ಯಾಯ ಮಾಡಿ ಕಡಿಮೆ ದರ ನೀಡುತ್ತಿದ್ದಾರೆ. ಒಕ್ಕೂಟಗಳೇ ಉತ್ಪಾದಿಸುವ ಹಸುವಿನ ಆಹಾರದ ಪ್ರತಿವರ್ಷ ಏರಿಕೆಯಾಗುತ್ತದೆ. ಆದರೆ, ಹಾಲಿನ ಖರೀದಿ ದರ ಮಾತ್ರ ನಿಂತಲ್ಲೇ ನಿಂತಿರುತ್ತದೆ ಇಲ್ಲವೇ ಇಳಿಮುಖವಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಮಾತ್ರ ಪ್ರತಿ ಲೀಟರ್‌ ಹಾಲಿಗೆ ಹೆಚ್ಚು ಬೆಲೆ ₹ 28.67 ದರ ನೀಡುತ್ತಿದೆ. ಅದೂ ಕನಿಷ್ಠ ಬೆಲೆಯಾಗಿದ್ದು ಅಲ್ಲಿನ ರೈತರು ₹ 30 ನೀಡುವಂತೆ ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಬಿಟ್ಟರೆ ಉಳಿದ 13 ಒಕ್ಕೂಟಗಳಲ್ಲಿ ₹ 25ಕ್ಕಿಂತಲೂ ಕಡಿಮೆ ಇದೆ. ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ (ಮನ್‌ಮುಲ್‌)
₹ 20 ದರ ನೀಡುತ್ತಿದ್ದು ಇಡೀ ರಾಜ್ಯದಲ್ಲಿ ಅತೀ ಕಡಿಮೆ ಬೆಲೆಯಾಗಿದೆ. ಒಕ್ಕೂಟ ನೀಡುತ್ತಿರುವ ಬೆಲೆಯ ಜೊತೆಗೆ ಸರ್ಕಾರ ₹ 5 ಸಹಾಯಧನ ನೀಡುತ್ತಿದ್ದು ದಕ್ಷಿಣ ಕನ್ನಡದಲ್ಲಿ ರೈತರಿಗೆ ಸಿಗುವ ಹಾಲಿನ ದರ ₹ 32.67, ಮಂಡ್ಯ ಜಿಲ್ಲೆಯಲ್ಲಿ ₹ 25 ದೊರೆಯುತ್ತದೆ.

ದರ ಕಡಿತ

ಹಾಲಿನ ಉಪಉತ್ಪನ್ನಗಳು ಮಾರಾಟವಾಗದೆ ಉಳಿದಿವೆ ಎಂದು ಕಾರಣ ಕೊಟ್ಟು ಮಂಡ್ಯ ಜಿಲ್ಲಾ ಒಕ್ಕೂಟ ಜ.1ರಿಂದ ಪ್ರತಿ ಲೀಟರ್ ಹಾಲಿಗೆ ₹ 2 ಕಡಿತಗೊಳಿಸಿದೆ. ದರ ₹ 22ರಿಂದ ₹ 20ಕ್ಕೆ ಕುಸಿದಿದೆ. ಮೈಷುಗರ್‌ ಕಾರ್ಖಾನೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳು ರೋಗಗ್ರಸ್ತವಾಗಿವೆ.

ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗಿವೆ. ಇಂತಹ ಸಂದರ್ಭದಲ್ಲಿ ರೈತರ ಪಾಲಿಗೆ ಹೈನುಗಾರಿಕೆ ಸಂಜೀವಿನಿಯಾಗಿತ್ತು. ರೈತ ಮಹಿಳೆಯರು ಡೇರಿಗೆ ಹಾಲು ಹಾಕಿ ಕುಟುಂಬಗಳನ್ನು ಕಾಪಾಡಿಕೊಂಡಿದ್ದರು.
ಆದರೆ, ಮನ್‌ಮುಲ್‌ ಏಕಾಏಕಿ ದರ ಕಡಿತ ಮಾಡಿರುವುದು ರೈತರ ಜಂಘಾಬಲವನ್ನೇ ಕುಸಿಯುವಂತೆ ಮಾಡಿದೆ.

ದಕ್ಷಿಣ ಕನ್ನಡ ಒಕ್ಕೂಟ 717 ಸಹಕಾರ ಸಂಘ ಹೊಂದಿದ್ದರೆ ಮಂಡ್ಯ ಹಾಲು ಒಕ್ಕೂಟ 1,200 ಸಹಕಾರ ಸಂಘಗಳನ್ನು ಹೊಂದಿದೆ. ದಕ್ಷಿಣ ಕನ್ನಡ ಒಕ್ಕೂಟದಲ್ಲಿ ನಿತ್ಯ 4.53 ಲಕ್ಷ ಕೆ.ಜಿ ಹಾಲು ಸಂಗ್ರಹವಾದರೆ ಮಂಡ್ಯ ಒಕ್ಕೂಟದಲ್ಲಿ ನಿತ್ಯ 8.70 ಲಕ್ಷ ಕೆ.ಜಿ ಹಾಲು ಸಂಗ್ರಹವಾಗುತ್ತದೆ. 1,200ಕ್ಕೂ ಹೆಚ್ಚು ಅಧಿಕೃತ ಮಾರಾಟಗಾರರಿದ್ದಾರೆ. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಂದಿನಿ ಪಾರ್ಲರ್‌ಗಳಿವೆ. ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಳ್ಳುವ ಸಾಕಷ್ಟು ಅವಕಾಶ ಮಂಡ್ಯ ಒಕ್ಕೂಟದ ಮುಂದಿದೆ. ಆದರೂ ರೈತರಿಗೆ ಅತೀ ಕಡಿಮೆ ದರ ನೀಡುತ್ತಿದ್ದು ಸಂಕಷ್ಟದಲ್ಲಿರುವ ರೈತರ ಹೊಟ್ಟೆಯ ಮೇಲೆ ಬರೆ ಎಳೆದಿದೆ.

ಅವ್ಯವಹಾರ

ಸಂಕಷ್ಟ ಸ್ಥಿತಿಯಲ್ಲಿರುವ ರೈತರ ಜೀವನ ಸುಧಾರಣೆ ಮಾಡಬೇಕಾದ ಮನ್‌ಮುಲ್‌ ಅವ್ಯವಹಾರದಲ್ಲಿ ಮುಳುಗಿದೆ ಎಂಬ ಆರೋಪ ಕೇಳಿ ಬಂದಿದೆ. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ (ರಾಷ್ಟ್ರೀಯ ಹೆದ್ದಾರಿ ಬದಿ)ದಲ್ಲಿರುವ ಮನ್‌ಮುಲ್‌ ಆವರಣದಲ್ಲಿ
₹ 300 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ಕಟ್ಟುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮನ್‌ಮುಲ್‌ ರೈತವಿರೋಧಿ ಕ್ರಮ ಖಂಡಸಿ ರೈತರು ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ. ಪ್ರತಿದಿನ ಒಂದಲ್ಲಾ ಒಂದುಕಡೆ ಮನ್‌ಮುಲ್‌ ವಿರುದ್ಧ ಪ್ರತಿಭಟನೆ ನಡೆಯುತ್ತಲೇ ಇವೆ.

‘ಮೆಗಾಡೇರಿ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ಮಾರುಕಟ್ಟೆ ವಿಸ್ತರಣೆ ಮಾಡದೇ ಉಪ ಉತ್ಪನ್ನಗಳ ದಾಸ್ತಾನು ಇಟ್ಟುಕೊಂಡಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಹಾಲಿನ ದರ ಕಡಿತಗೊಳಿಸಿದ್ದಾರೆ. ಮನ್‌ಮುಲ್‌ ಆಡಳಿತ ಮಂಡಳಿ ವಿರುದ್ಧ ಸಿಬಿಐ ತನಿಖೆಯಾಗಬೇಕು’ ಎಂದು ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಒತ್ತಾಯಿಸುತ್ತಾರೆ.

‘2,863 ಮೆಟ್ರಿಕ್‌ ಟನ್‌ ಹಾಲಿನ ಪುಡಿ, 2,270 ಮೆಟ್ರಿಕ್‌ ಟನ್‌ ಬೆಣ್ಣೆ, 200 ಮೆಟ್ರಿಕ್‌ ಟನ್‌ ತುಪ್ಪ ಮಾರಾಟವಾಗದೇ ಉಳಿದಿದೆ. ಬೆಲೆ ಕಡಿತಗೊಳಿಸುವುದು ಅನಿವಾರ್ಯವಾಗಿತ್ತು’ ಎಂದು ಮನ್‌ಮುಲ್‌ ಅಧ್ಯಕ್ಷ ಕದಲೂರು ರಾಮಕೃಷ್ಣ ಸಮರ್ಥನೆ ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.