ADVERTISEMENT

Cafe Coffee Day: ಕಾಫಿ ಡೇ ದಿವಾಳಿ ಪ್ರಕ್ರಿಯೆ ರದ್ದು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 16:05 IST
Last Updated 27 ಫೆಬ್ರುವರಿ 2025, 16:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ವಿರುದ್ಧ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿ (ಎನ್‌ಸಿಎಲ್‌ಟಿ) ನೀಡಿದ್ದ ಆದೇಶವನ್ನು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಚೆನ್ನೈ ಪೀಠವು ರದ್ದುಪಡಿಸಿದೆ. 

ನ್ಯಾಯಮೂರ್ತಿಗಳಾದ ಶರದ್ ಕುಮಾರ್ ಶರ್ಮಾ ಮತ್ತು ಜತೀಂದ್ರನಾಥ್ ಸ್ವೈನ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.  

ಕಾಫಿ ಡೇ ಸಮೂಹದ ಮಾತೃಸಂಸ್ಥೆಯಾದ ಕಾಫಿ ಡೇ ಎಂಟರ್‌ಪ್ರೈಸಸ್‌ ತನಗೆ ₹228.45 ಕೋಟಿ ಬಾ‍ಕಿ ಪಾವತಿಸಿಲ್ಲ ಎಂದು ಆರೋಪಿಸಿದ್ದ ಐಡಿಬಿಐ ಟ್ರಸ್ಟಿಶಿಪ್‌ ಸರ್ವಿಸಸ್‌ ಲಿಮಿಟೆಡ್‌, ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿಯು ದಿವಾಳಿ ಪ್ರಕ್ರಿಯೆಗೆ ಅನುಮತಿ ನೀಡಿ ಆದೇಶಿಸಿತ್ತು.

ADVERTISEMENT

ಇದನ್ನು ಪ್ರಶ್ನಿಸಿ ಸಿಡಿಇಎಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕಿ ಮತ್ತು ಸಿಇಒ ಮಾಳವಿಕಾ ಹೆಗ್ಡೆ ಅವರು, ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಎನ್‌ಸಿಎಲ್‌ಟಿ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.

ಈ ತಡೆಯಾಜ್ಞೆಯನ್ನು ಐಡಿಬಿಐ ಟ್ರಸ್ಟಿಶಿಪ್‌ ಸರ್ವಿಸಸ್‌ ಲಿಮಿಟೆಡ್‌, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮೇಲ್ಮನವಿಯನ್ನು ಫೆಬ್ರುವರಿ 21ಕ್ಕೆ ಮೊದಲು ಇತ್ಯರ್ಥಪಡಿಸಬೇಕು ಎಂದು ಎನ್‌ಸಿಎಲ್‌ಎಟಿ ಚೆನ್ನೈ ಪೀಠಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.