ADVERTISEMENT

ಎನ್‌ಎಂಪಿಟಿ: ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆ

₹469 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 22 ಮೇ 2019, 18:43 IST
Last Updated 22 ಮೇ 2019, 18:43 IST
ಮಂಗಳೂರಿನ ಎನ್‌ಎಂಪಿಟಿ ಆವರಣದಲ್ಲಿ ಚೆಟ್ಟಿನಾಡ ಕೋಲ್‌ ಟರ್ಮಿನಲ್‌ ಕಂಪನಿ ಅಳವಡಿಸಿರುವ ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆ.
ಮಂಗಳೂರಿನ ಎನ್‌ಎಂಪಿಟಿ ಆವರಣದಲ್ಲಿ ಚೆಟ್ಟಿನಾಡ ಕೋಲ್‌ ಟರ್ಮಿನಲ್‌ ಕಂಪನಿ ಅಳವಡಿಸಿರುವ ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆ.   

ಮಂಗಳೂರು: ಇಲ್ಲಿನ ನವಮಂಗಳೂರು ಬಂದರು ಮಂಡಳಿಯ 16 ನೇ ಧಕ್ಕೆಯಲ್ಲಿ ನಿರ್ಮಾಣವಾದ ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆಯನ್ನು ಬುಧವಾರ ಹಡಗು ಸಚಿವಾಲಯದ ಕಾರ್ಯದರ್ಶಿ ಗೋಪಾಲಕೃಷ್ಣ ಉದ್ಘಾಟಿಸಿದರು.

ಮೇ. ಚೆಟ್ಟಿನಾಡ ಮಂಗಳೂರು ಕೋಲ್ ಟರ್ಮಿನಲ್ ಕಂಪನಿಯು ನಿರ್ವಹಿಸುತ್ತಿರುವ ಈ ಸೌಲಭ್ಯವನ್ನು ₹ 469.46 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿನ್ಯಾಸ, ನಿರ್ಮಾಣ, ಹಣಕಾಸು ನಿರ್ವಹಣೆ ಹಾಗೂ ಹಸ್ತಾಂತರ (ಡಿಬಿಎಫ್‌ಒಟಿ) ಆಧಾರದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಹೊಸ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದ ಚೆಟ್ಟಿನಾಡ ಕಂಪನಿಯ ಸಮೂಹ ನಿರ್ದೇಶಕ ಚಂದ್ರಮೌಳೀಶ್ವರನ್‌ ವಿ., ‘ಕಲ್ಲಿದ್ದಲನ್ನು ಹಡಗಿನಿಂದ ಇಳಿಸುವುದು, ಲಾರಿ ಮತ್ತು ರೈಲ್ವೆ ವ್ಯಾಗನ್‌ಗಳಿಗೆ ಭರ್ತಿ ಮಾಡುವ ಪ್ರಕ್ರಿಯೆ ಸಂಪೂರ್ಣ ಯಾಂತ್ರೀಕೃತವಾಗಿದ್ದು, ಕೆಲವೇ ನಿಮಿಷಗಳಲ್ಲಿ ವ್ಯಾಗನ್‌ಗಳಿಗೆ ಕಲ್ಲಿದ್ದಲು ಭರ್ತಿ ಮಾಡಬಹುದಾಗಿದೆ’ ಎಂದರು.

ADVERTISEMENT

‘ಪ್ರತಿ ಗಂಟೆಗೆ 2 ಸಾವಿರ ಟನ್ ಕಲ್ಲಿದ್ದಲನ್ನು ಹಡಗುಗಳಿಂದ ಕೆಳಗೆ ಇಳಿಸಬಹುದಾಗಿದೆ. ತಲಾ 2 ಸಾವಿರ ಟನ್‌ನ ಎರಡು ಯಂತ್ರಗಳನ್ನು ಅಳವಡಿಸಲಾಗಿದೆ. ವ್ಯಾಗನ್‌ಗಳಿಗೆ ಕಲ್ಲಿದ್ದಲ್ಲು ತುಂಬುವ ವ್ಯವಸ್ಥೆಯು 1,600 ಟನ್‌ ಸಾಮರ್ಥ್ಯ ಹೊಂದಿದೆ. ಒಂದು ದಿನದಲ್ಲಿ 59 ವ್ಯಾಗನ್‌ ಸಾಮರ್ಥ್ಯದ ಏಳು ರೇಕ್‌ಗಳನ್ನು ಭರ್ತಿ ಮಾಡಬಹುದಾಗಿದೆ’ ಎಂದು ಹೇಳಿದರು.

‘ಸಂಪೂರ್ಣ ವ್ಯವಸ್ಥೆಯು ಯಾಂತ್ರೀಕೃತವಾಗಿದ್ದು, ಕೊಳವೆಯ ಮೂಲಕ ಕಲ್ಲಿದ್ದಲ್ಲು ಸಾಗಣೆ ನಡೆಯಲಿದೆ. ಇದರಿಂದ ಮಾಲಿನ್ಯದ ಪ್ರಮಾಣವೂ ಕಡಿಮೆ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.