ADVERTISEMENT

ಶೇ 27ರಷ್ಟು ಕುಸಿದ ಪೇಟಿಎಂ ಷೇರು ಮೌಲ್ಯ

ಪಿಟಿಐ
Published 18 ನವೆಂಬರ್ 2021, 16:36 IST
Last Updated 18 ನವೆಂಬರ್ 2021, 16:36 IST

ನವದೆಹಲಿ: ಪಾವತಿ ಸೇವೆಗಳನ್ನು ಒದಗಿಸುವ ‘ಪೇಟಿಎಂ’ನ ಮಾತೃಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ನ ಷೇರುಗಳ ಮೌಲ್ಯವು, ಷೇರು ಮಾರುಕಟ್ಟೆ ಪ್ರವೇಶಿಸಿದ ದಿನವೇ ಶೇಕಡ 27ರಷ್ಟು ಇಳಿಕೆ ಕಂಡಿದೆ. ಕಂಪನಿಯು ಐಪಿಒ ಸಂದರ್ಭದಲ್ಲಿ ‍ಪ್ರತಿ ಷೇರಿಗೆ ₹ 2,150 ಬೆಲೆ ನಿಗದಿ ಮಾಡಿತ್ತು.

ಮುಂಬೈ ಷೇರುಪೇಟೆಯಲ್ಲಿ ಈ ಷೇರು ವಹಿವಾಟು ಆರಂಭಿಸುವಾಗಲೇ ಶೇ 9ರಷ್ಟು ಕುಸಿತ ಕಂಡಿತು. ದಿನದ ಅಂತ್ಯಕ್ಕೆ ಶೇ 27.24ರಷ್ಟು ಕುಸಿಯಿತು. ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಷೇರಿನ ಬೆಲೆಯು ₹ 1,564 ಆಗಿತ್ತು.

ಕಂಪನಿಯ ಷೇರುಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗುವ ಸಂದರ್ಭದಲ್ಲಿ ಆಯೋಜಿಸಿದ್ದಕಾರ್ಯಕ್ರಮದಲ್ಲಿ ಮಾತನಾಡಿದ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮ, ‘ಪೇಟಿಎಂನ ಕಥನವು ಸಹಸ್ರಾರು ಉದ್ಯಮಿಗಳಿಗೆ ಪ್ರೇರಣೆ ಆಗುತ್ತದೆ ಎಂದು ಭಾವಿಸಿದ್ದೇನೆ’ ಎಂದರು.

ADVERTISEMENT

ದಿನದ ಅಂತ್ಯಕ್ಕೆ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 37 ಸಾವಿರ ಕೋಟಿಯಷ್ಟು ಕಡಿಮೆ ಆಗಿದೆ. ‘ಭಾರತದ ಅತಿದೊಡ್ಡ ಐಪಿಒ ಪೇಟಿಎಂನದ್ದು. ಇದರ ಷೇರು ಮೌಲ್ಯವು ಶೇ 27ರಷ್ಟು ಇಳಿದಿದೆ. ಕಂಪನಿಯ ವಾಣಿಜ್ಯ ವಹಿವಾಟಿನ ಮಾದರಿಯನ್ನು, ಅದು ಲಾಭ ಗಳಿಸಿಲ್ಲದಿರುವುದನ್ನು ಮತ್ತು ಕಂಪನಿಯ ಮೌಲ್ಯ ನಿಗದಿ ಭಾರಿ ಪ್ರಮಾಣದಲ್ಲಿ ಇರುವುದನ್ನು ಹೂಡಿಕೆದಾರರು ಗಮನಿಸಿದ್ದಾರೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ ಸಂಸ್ಥೆಯ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.