ADVERTISEMENT

ಹೂಡಿಕೆ ಹೆಚ್ಚಿಸಲು ಖಾಸಗಿ ವಲಯಕ್ಕೆ ಪ್ರಧಾನಿ ಕರೆ

ಪಿಟಿಐ
Published 7 ಮಾರ್ಚ್ 2023, 15:43 IST
Last Updated 7 ಮಾರ್ಚ್ 2023, 15:43 IST
   

ನವದೆಹಲಿ (ಪಿಟಿಐ): ಹೂಡಿಕೆಗಳನ್ನು ಹೆಚ್ಚಿಸಬೇಕು ಹಾಗೂ 2023–24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಉದ್ಯಮ ವಲಯಕ್ಕೆ ಮಂಗಳವಾರ ಕರೆ ನೀಡಿದ್ದಾರೆ.

ಬಜೆಟ್‌ ಕುರಿತ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಬಂಡವಾಳ ವೆಚ್ಚಕ್ಕೆ ನಿಗದಿ ಮಾಡುವ ಮೊತ್ತವನ್ನು ಕೇಂದ್ರವು ₹ 10 ಲಕ್ಷ ಕೋಟಿಗೆ ಹೆಚ್ಚು ಮಾಡಿದೆ. ಇದು ಈವರೆಗಿನ ಗರಿಷ್ಠ ಮೊತ್ತ’ ಎಂದಿದ್ದಾರೆ.

‘ಕೇಂದ್ರ ಸರ್ಕಾರವು ತನ್ನ ಹೂಡಿಕೆಯನ್ನು ಹೆಚ್ಚು ಮಾಡುತ್ತಿರುವ ರೀತಿಯಲ್ಲಿಯೇ ದೇಶದ ಖಾಸಗಿ ವಲಯವು ಕೂಡ ಹೂಡಿಕೆಗಳನ್ನು ಹೆಚ್ಚು ಮಾಡಬೇಕು. ಆಗ ದೇಶಕ್ಕೆ ಅತಿಹೆಚ್ಚಿನ ಪ್ರಯೋಜನ ಸಿಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಕಾರ್ಪೊರೇಟ್ ತೆರಿಗೆ ಹಾಗೂ ಆದಾಯ ತೆರಿಗೆ ಪ್ರಮಾಣದಲ್ಲಿ ಇಳಿಕೆ, ಜಿಎಸ್‌ಟಿ ಜಾರಿ ಕಾರಣದಿಂದಾಗಿ ದೇಶದಲ್ಲಿ ತೆರಿಗೆ ಹೊರೆಯು ತಗ್ಗಿದೆ ಎಂದು ಕೂಡ ಅವರು ಹೇಳಿದ್ದಾರೆ.

ರುಪೇ ಮತ್ತು ಯುಪಿಐ ಈಗ ಕಡಿಮೆ ವೆಚ್ಚದ ಪಾವತಿ ಸೇವಾ ಸೌಲಭ್ಯಗಳಷ್ಟೇ ಅಲ್ಲ. ಬದಲಿಗೆ, ಅವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಅಸ್ಮಿತೆ ಕೂಡ ಹೌದು. ಯುಪಿಐ ವ್ಯವಸ್ಥೆಯು ಹಣಕಾಸಿನ ಒಳಗೊಳ್ಳುವಿಕೆ ಮತ್ತು ಜನರ ಬಲವರ್ಧನೆ ವಿಚಾರದಲ್ಲಿ ಇಡೀ ವಿಶ್ವಕ್ಕೆ ನೆರವಾಗಬೇಕು ಎಂದು ಅವರು ಆಶಿಸಿದ್ದಾರೆ.

ಸ್ಥಳೀಯ ಉತ್ಪನ್ನಗಳಿಗೆ ಆಗ್ರಹ ಮಂಡಿಸುವುದು ಈಗ ಒಂದು ಆಯ್ಕೆ ಮಾತ್ರವೇ ಅಲ್ಲ. ಬದಲಿಗೆ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದು ಹಾಗೂ ಸ್ವಾವಲಂಬನೆಯು ರಾಷ್ಟ್ರೀಯ ಹೊಣೆಗಾರಿಕೆಯೂ ಹೌದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.