ADVERTISEMENT

ಆಟಿಕೆಗೆ ಕಡಿಮೆ ಪ್ಲಾಸ್ಟಿಕ್‌ ಬಳಸಿ: ಪ್ರಧಾನಿ ಮೋದಿ ಮನವಿ

ಪಿಟಿಐ
Published 27 ಫೆಬ್ರುವರಿ 2021, 14:55 IST
Last Updated 27 ಫೆಬ್ರುವರಿ 2021, 14:55 IST
ಪ್ರಧಾನಿ ನರೇಂದ್ರ ಮೋದಿ ಅವರು ಆಟಿಕೆ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಆಟಿಕೆ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ಆಟಿಕೆಗಳನ್ನು ತಯಾರಿಸುವಾಗ ಕಡಿಮೆ ಪ್ಲಾಸ್ಟಿಕ್‌ ಬಳಸುವಂತೆ ಹಾಗೂ ಪರಿಸರ ಸ್ನೇಹಿ ಮತ್ತು ಮರುಬಳಕೆ ಮಾಡುವಂತಹ ವಸ್ತುಗಳನ್ನೇ ಹೆಚ್ಚಾಗಿ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆಟಿಕೆ ಉದ್ಯಮಕ್ಕೆ ಮನವಿ ಮಾಡಿದ್ದಾರೆ.

ದೇಶದ ಮೊದಲ ಆಟಿಕೆ ಜಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಆಟಿಕೆ ವಲಯದಲ್ಲಿ ನಾವು ಸ್ವಾವಲಂಬನೆ ಸಾಧಿಸುವ ಜೊತೆ ಜೊತೆಗೆ ಜಾಗತಿಕ ಮಾರುಕಟ್ಟೆಯನ್ನೂ ತಲುಪಬೇಕು ಎಂದು ಹೇಳಿದ್ದಾರೆ.

ಈ ಜಾತ್ರೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಪ್ರದರ್ಶಕರು ಭಾಗವಹಿಸಿದ್ದರು.

ADVERTISEMENT

ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಬಹಳ ಕಡಿಮೆ ಇದ್ದು, ಸದ್ಯ, ದೇಶದಲ್ಲಿ ಲಭ್ಯವಿರುವ ಶೇ 85ರಷ್ಟು ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ಉಲ್ಲೇಖಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಹೆಚ್ಚು ತಯಾರಿಸುವ ಮೂಲಕ ಈ ಸ್ಥಿತಿಯನ್ನು ಬದಲಿಸಬೇಕಿದೆ ಎಂದು ಹೇಳಿದರು.

ಭಾರತದಲ್ಲಿಯೇ ತಯಾರಿಕೆಗೆ ಈಗ ಬೇಡಿಕೆ ಇದೆ ಎಂದಾದರೆ, ಕರಕುಶಲ ವಸ್ತುಗಳಿಗೂ ದೇಶದಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಕೈಯಿಂದ ತಯಾರಿಸುವ ಆಟಿಕೆಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಚನ್ನಪಟ್ಟಣ, ವಾರಾಣಸಿ ಮತ್ತು ಜೈಪುರದ ಸಾಂಪ್ರದಾಯಿಕ ಆಟಿಕೆ ತಯಾರಕರ ಜೊತೆ ಸಂವಾದ ನಡೆಸಿದ ಅವರು, ಬದಲಾಗುತ್ತಿರುವ ಮಕ್ಕಳ ಅಭಿರುಚಿಗೆ ತಕ್ಕಂತೆ ಹೊಸ ಆಟಿಕೆಗಳನ್ನು ರೂಪಿಸುವಂತೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.