ADVERTISEMENT

ಪತಿಯ ಹೆಸರಿನಲ್ಲಿ ಸಾಲ ಕೊಂಡರೆ ನೀವು ತೆರಿಗೆ ವಿನಾಯಿತಿ ಪಡೆಯುವಂತಿಲ್ಲ

ಯು.ಪಿ.ಪುರಾಣಿಕ್
Published 29 ಜನವರಿ 2019, 19:45 IST
Last Updated 29 ಜನವರಿ 2019, 19:45 IST
ಯು. ಪಿ. ಪುರಾಣಿಕ್‌
ಯು. ಪಿ. ಪುರಾಣಿಕ್‌   

– ಯಶೋಧಾ, ಹುಬ್ಬಳ್ಳಿ

ನಾನು ನನ್ನ ಪತಿ ಇಬ್ಬರೂ ಸರ್ಕಾರಿ ನೌಕರರು. ನನ್ನ ಸಂಬಳ ಕಡಿತವಾಗಿ ₹ 45,000 ಹಾಗೂ ಪತಿಯ ಸಂಬಳ ₹ 25,000 ಇದೆ. ಇಬ್ಬರಿಂದ ಪ್ರತಿ ತಿಂಗಳೂ ₹ 15 ಸಾವಿರ ಕೆಜಿಐಡಿಯಲ್ಲಿ ಉಳಿಸುತ್ತೇವೆ. ಬೇರೆ ಯಾವ ಉಳಿತಾಯವೂ ಇಲ್ಲ. ನಮಗೆ 8 ಹಾಗೂ 4 ವರ್ಷದ ಇಬ್ಬರು ಗಂಡುಮಕ್ಕಳು. ಇವರ ಭವಿಷ್ಯದ ಯೋಜನೆಗೆ ಮ್ಯೂಚುವಲ್ ಫಂಡ್‌ನಲ್ಲಿ ಹಣ ಹಾಕಬಹುದೇ ತಿಳಿಸಿ. ನಿವೇಶನ ಕೊಂಡು ಮನೆ ಕಟ್ಟಿಸಲು ಯಾವ ಬ್ಯಾಂಕ್‌ನಲ್ಲಿ ಸಾಲ ಪಡೆಯಲಿ. ಗರಿಷ್ಠ ಎಷ್ಟು ಸಾಲ ದೊರೆಯಬಹುದು?

ಉತ್ತರ: ನೀವು ಹುಬ್ಬಳ್ಳಿಯಲ್ಲಿ ನಿವೇಶನ ಕೊಂಡು ಮನೆ ಕಟ್ಟಿಸಿ. ಯಾವುದೇ ಬ್ಯಾಂಕ್‌ನಲ್ಲಿ ಗೃಹ ಸಾಲ ಪಡೆದರೂ ಸಾಲದ ಕಂತು ಹಾಗೂ ಬಡ್ಡಿ ಕ್ರಮವಾಗಿ ಸೆಕ್ಷನ್‌ 80 ಸಿ ಹಾಗೂ 24 (ಬಿ) ಆಧಾರದ ಮೇಲೆ ತೆರಿಗೆ ವಿನಾಯಿತಿಪಡೆಯಬಹುದು. ನಿವೇಶನ ಕೊಳ್ಳುವಾಗ ನಿಮ್ಮ ಹೆಸರಿನಲ್ಲಿಯೇ ಕೊಳ್ಳಿರಿ. ಪತಿಯ ಹೆಸರಿನಲ್ಲಿ ಸಾಲ ಕೊಂಡರೆ ನೀವು ತೆರಿಗೆ ವಿನಾಯಿತಿ ಪಡೆಯುವಂತಿಲ್ಲ. ನಿಮಗೆ ಗರಿಷ್ಠ ₹ 35 ಲಕ್ಷ ಗೃಹಸಾಲ ದೊರೆಯಬಹುದು.ಸಂಬಳ ಪಡೆಯುವ ಬ್ಯಾಂಕ್‌ನಲ್ಲಿಯೇ ಗೃಹ ಸಾಲ ಪಡೆಯಿರಿ.

ADVERTISEMENT

ಕೆಜಿಐಡಿ ಹೂಡಿಕೆ ತಪ್ಪಲ್ಲ. ಇದು ಜೀವವಿಮಾ ಪಾಲಿಸಿ. ಮಧ್ಯದಲ್ಲಿ ನಿಲ್ಲಿಸಬೇಡಿ. ಕೆಜಿಐಡಿಯಲ್ಲಿಯೂ ಸ್ವಲ್ಪ ಸಾಲ ಸಿಗಬಹುದು. ನಿಮ್ಮ ಇಬ್ಬರು ಗಂಡುಮಕ್ಕಳ ಸಲುವಾಗಿ ಎಷ್ಟಾದರಷ್ಟು ದೀರ್ಘಾವಧಿಗೆ ಅಂದರೆ 10 ವರ್ಷಗಳ ಆರ್‌.ಡಿ ಮಾಡಿಸಿ. ಮುಂದೆ ಅವಧಿ ಮುಗಿಯುತ್ತಲೇ ಅವಧಿ ಠೇವಣಿಗೆ ವರ್ಗಾಯಿಸಿ. ಆರ್.ಡಿ. ತಿರುಗಿ ಮಾಡಿ. ಈ ಪ್ರಕ್ರಿಯೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ. ಮ್ಯೂಚುವಲ್ ಫಂಡ್‌ ಹೂಡಿಕೆ ಚೆನ್ನಾಗಿದೆ. ಆದರೆ ಖಚಿತ ವರಮಾನ ಬರುವ ಸಾಧ್ಯತೆ ವಿರಳ.

– ಶ್ರೀನಾಥ್‌, ಬೆಂಗಳೂರು

ನನ್ನೊಡನೆ ₹ 10 ಲಕ್ಷ ಹಣವಿದೆ. ಇದರಿಂದ ತಿಂಗಳಿಗೆ ₹ 10 ಸಾವಿರದಿಂದ ₹ 12 ಸಾವಿರ ಪಡೆಯಲು ಮಾರ್ಗದರ್ಶನ ಮಾಡಿ. ಉತ್ತಮ ಸುರಕ್ಷಿತ ಮಾರ್ಗ ತಿಳಿಸಿ.

ಉತ್ತರ: ಬ್ಯಾಂಕ್‌–ಅಂಚೆ ಕಚೇರಿ ಠೇವಣಿ ಹೊರತುಪಡಿಸಿ ಉತ್ತಮ ಸುರಕ್ಷಿತ ಮಾರ್ಗ ಬೇರೊಂದಿಲ್ಲ. ಆದರೆ ಈ ಎರಡೂ ಕಡೆಯಲ್ಲಿ ನೀವು ಬಯಸುವ ₹ 10 ಸಾವಿರದಿಂದ ₹ 12 ಸಾವಿರ ತಿಂಗಳಿಗೆ ಬರಲಾರದು. ಹೆಚ್ಚಿನ ವರಮಾನದ ಆಸೆಯಿಂದ ಅಸಲು ಕಳೆದುಕೊಳ್ಳುವುದು ಜಾಣತನವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.