ಮುಂಬೈ: ಯುಪಿಐ ಮೂಲಕ ಗ್ರಾಹಕರಿಂದ ವ್ಯಾಪಾರಿಗಳಿಗೆ ಪಾವತಿಸುವ ಮೊತ್ತದ ಮಿತಿ ಪರಿಷ್ಕರಿಸುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್‌ಪಿಸಿಐ) ನೀಡಿದೆ.
ಪ್ರಸ್ತುತ ಯುಪಿಐ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ಮತ್ತು ಗ್ರಾಹಕನಿಂದ ವರ್ತಕನಿಗೆ (ಪಿ2ಎಂ) ವಹಿವಾಟು ಮಿತಿಯು ₹1 ಲಕ್ಷವಿದೆ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ₹2 ಲಕ್ಷ ಮತ್ತು ಇತರೆ ವಹಿವಾಟಿಗೆ ₹5 ಲಕ್ಷ ನಿಗದಿಪಡಿಸಲಾಗಿದೆ.
ಬುಧವಾರ ಮುಕ್ತಾಯಗೊಂಡ ಆರ್‌ಬಿಐ ಹಣಕಾಸು ನೀತಿ ಸಮತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗವರ್ನರ್ ಸಂಜಯ್ ಮಲ್ಹೋತ್ರಾ, ‘ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಯುಪಿಐ ವಹಿವಾಟು ಮಿತಿ ಪರಿಷ್ಕರಿಸುವ ಅಧಿಕಾರವನ್ನು ಎನ್‌ಪಿಸಿಐಗೆ ನೀಡಲಾಗಿದೆ ಎಂದರು.
ವ್ಯಕ್ತಿಯಿಂದ ವ್ಯಕ್ತಿಗೆ ಇರುವ ಪಾವತಿ ಮಿತಿಯು ₹1 ಲಕ್ಷದಷ್ಟೇ ಇರುತ್ತದೆ. ವಹಿವಾಟಿಗೆ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಲು ಎನ್‌ಪಿಸಿಐಗೆ ನಿರ್ದೇಶನ ನೀಡಿದರು.
ಬಳಕೆ ಮತ್ತು ಆದಾಯ ಗಳಿಕೆ ಉದ್ದೇಶಗಳಿಗಾಗಿ ನಿಯಂತ್ರಿತ ಸಂಸ್ಥೆಗಳು ಚಿನ್ನದ ಆಭರಣಗಳ ಆಧಾರದ ಮೇಲೆ ಸಾಲ ನೀಡುತ್ತವೆ. ಈ ರೀತಿಯ ಸಾಲಗಳ ನಡವಳಿಕೆಗೆ ಸಂಬಂಧಿಸಿದ ಅಂಶ ಕುರಿತು ಸಮಗ್ರ ನಿಯಮಾವಳಿ ರೂಪಿಸಲು ನಿರ್ಧರಿಸಲಾಗಿದೆ ಎಂದರು.
ಹೊಂದಾಣಿಕೆ ನಿಲುವು: ‘ಈ ಮೊದಲು ಸಭೆಯು ಹಣದುಬ್ಬರ ನಿಯಂತ್ರಿಸುವ ಮೂಲಕ ಆರ್ಥಿಕ ಬೆಳವಣಿಗೆಯ ಸ್ಥಿರತೆಗೆ ಒತ್ತು ನೀಡಲು ‘ತಟಸ್ಥ’ ನೀತಿ ಅನುಸರಿಸಿತ್ತು. ಈಗ ‘ಹೊಂದಾಣಿಕೆ’ ನಿಲುವು ತಳೆದಿದೆ ಎಂದು ಮಲ್ಹೋತ್ರಾ ತಿಳಿಸಿದರು.
‘ಮುಂದಿನ ಎಂಪಿಸಿ ಸಭೆಯ ವೇಳೆಗೆ ದೇಶದಲ್ಲಿ ಆರ್ಥಿಕ ಅನಿಶ್ಚಿತ ಸ್ಥಿತಿ ಎದುರಾದರೆ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಅಥವಾ ಕಡಿತ ಮುಂದುವರಿಸುವುದು ಈ ನಿಲುವಿನ ಹಿಂದಿರುವ ಉದ್ದೇಶವಾಗಿದೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.